ಶುಭ್ಮನ್ ಗಿಲ್ ನಾಯಕನಾಗಲು ರಾಹುಲ್ ದ್ರಾವಿಡ್ ಕಾರಣ..!
India Test Squad For England Series: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ಲೀಡ್ಸ್ನಲ್ಲಿ ನಡದರೆ, ಎರಡನೇ ಪಂದ್ಯವು ಬರ್ಮಿಂಗ್ಹ್ಯಾಮ್ನಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯಕ್ಕೆ ಲಾರ್ಡ್ಸ್ ಮೈದಾನವು ಆತಿಥ್ಯವಹಿಸಲಿದೆ. ಹಾಗೆಯೇ 4ನೇ ಮತ್ತು 5ನೇ ಪಂದ್ಯಗಳು ಮ್ಯಾಂಚೆಸ್ಟರ್ ಹಾಗೂ ಲಂಡನ್ನಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ.

ಭಾರತ ಟೆಸ್ಟ್ ತಂಡದ ನೂತನ ನಾಯಕನಾಗಿ ಶುಭ್ಮನ್ ಗಿಲ್ (Shubman Gill) ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಗಿಲ್ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದು, ಈ ಮೂಲಕ ಟೀಮ್ ಇಂಡಿಯಾವನ್ನು ಟೆಸ್ಟ್ನಲ್ಲಿ ಮುನ್ನಡೆಸಿದ 37ನೇ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಭಾರತ ಟೆಸ್ಟ್ ತಂಡದ ನಾಯಕತ್ವದ ರೇಸ್ನಲ್ಲಿ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹೆಸರುಗಳು ಮುಂಚೂಣಿಯಲ್ಲಿದ್ದವು. ಇದಾಗ್ಯೂ ಗಿಲ್ಗೆ ಪಟ್ಟ ಕಟ್ಟಲು ಮುಖ್ಯ ಕಾರಣ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಎಂದು ವರದಿಯಾಗಿದೆ.
ರಾಹುಲ್ ದ್ರಾವಿಡ್ ಅವರ ಸೂಚನೆ ಮೇರೆಗೆ ಶುಭ್ಮನ್ ಗಿಲ್ ಅವರಿಗೆ ಬಿಸಿಸಿಐ ನಾಯಕತ್ವವನ್ನು ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಆಯ್ಕೆ ಸಮಿತಿ ಹೊಸ ನಾಯಕನ ಹುಡುಕಾಟಕ್ಕೆ ಇಳಿದಿತ್ತು. ಈ ವೇಳೆ ಆಯ್ಕೆ ಸಮಿತಿ ಸದಸ್ಯರು ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಕೆಲ ಸಲಹೆಗಳನ್ನು ಪಡೆದಿದ್ದಾರೆ.
ಭಾರತ ತಂಡದ ಟೆಸ್ಟ್ ನಾಯಕತ್ವವನ್ನು ರಿಷಭ್ ಪಂತ್ ಅಥವಾ ಶುಭ್ಮನ್ ಗಿಲ್ಗೆ ನೀಡುವ ಬಗ್ಗೆ ಆಯ್ಕೆ ಸಮಿತಿಯಲ್ಲಿ ಚರ್ಚೆಗಳು ಮುಂದುವರೆದಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಅವರ ಅಭಿಪ್ರಾಯವನ್ನು ಕೇಳಲಾಗಿದೆ. ಇತ್ತ ದ್ರಾವಿಡ್, ಶುಭ್ಮನ್ ಗಿಲ್ ಅವರಲ್ಲಿನ ನಾಯಕತ್ವದ ಗುಣಗಳ ಬಗ್ಗೆ ವಿವರಿಸಿ ತಿಳಿಸಿದ್ದಾರೆ. ಹೀಗಾಗಿ ಅಂತಿಮವಾಗಿ ಶುಭ್ಮನ್ ಗಿಲ್ ಅವರನ್ನು ಕ್ಯಾಪ್ಟನ್ ಮಾಡಲು ನಿರ್ಧರಿಸಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ತಿಳಿಸಲಾಗಿದೆ.
ರಾಹುಲ್ ದ್ರಾವಿಡ್ ಅವರಿಗೆ ಅಂಡರ್-19 ತಂಡದಿಂದಲೂ ಶುಭ್ಮನ್ ಗಿಲ್ ಚಿರಪರಿಚಿತ. ದ್ರಾವಿಡ್ ಭಾರತ ಕಿರಿಯರ ತಂಡದ ಕೋಚ್ ಆಗಿದ್ದ ವೇಳೆ ಗಿಲ್ ನಾಯಕರಾಗಿದ್ದರು. ಹೀಗಾಗಿ ನಾಯಕನಾಗಿ ಗಿಲ್ ಅವರ ಸಾಮರ್ಥ್ಯದ ಬಗ್ಗೆ ಅವರಿಗೆ ಉತ್ತಮ ಅರಿವಿತ್ತು. ಇದೇ ಕಾರಣದಿಂದಾಗಿ ಶುಭ್ಮನ್ ಗಿಲ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವುದು ಸೂಕ್ತ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದರು. ಹೀಗಾಗಿಯೇ ಯುವ ಆಟಗಾರನಿಗೆ ನಾಯಕತ್ವ ನೀಡಲು ನಿರ್ಧರಿಸಿದೆವು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶುಭ್ಮನ್ ಗಿಲ್ ನಾಯಕತ್ವ:
ಶುಭ್ಮನ್ ಗಿಲ್ ಈ ಹಿಂದೆ ಅಂಡರ್-19 ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ರಣಜಿ ಕ್ರಿಕೆಟ್ನಲ್ಲಿ ಪಂಜಾಬ್ ತಂಡದ ಕಪ್ತಾನನಾಗಿಯೂ ಕಣಕ್ಕಿಳಿದಿದ್ದರು. ಇದೀಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: IPL 2025: ನಾಯಕನಾಗಿ ಕಣಕ್ಕಿಳಿಯದಿದ್ರು ರಜತ್ ಪಾಟಿದಾರ್ಗೆ 24 ಲಕ್ಷ ರೂ. ದಂಡ
ಅಂದರೆ ಶುಭ್ಮನ್ ಗಿಲ್ಗೆ ನಾಯಕತ್ವದ ಅನುಭವ ಇದೆ. ಈ ಅನುಭವದೊಂದಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
