ಇಂಗ್ಲೆಂಡ್ನಲ್ಲಿ ನಡೆದ ಒನ್ ಡೇ ಕಪ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಪೃಥ್ವಿ ಶಾ (Prithvi Shaw) ಮುಂದಿನ ಮೂರು ತಿಂಗಳು ಮೈದಾನದಿಂದ ಹೊರಗುಳಿಯುವ ಸಾಧ್ಯತೆಯಿದೆ. ಈ 3 ತಿಂಗಳ ನಡುವೆ ದೇಶೀಯ ಟೂರ್ನಿಗಳು ನಡೆಯಲಿದ್ದು, ಈ ವೇಳೆ ಅವರು ಕಣಕ್ಕಿಳಿಯುವುದು ಅನುಮಾನ ಎಂದು ತಿಳಿದು ಬಂದಿದೆ.
ಈ ಬಾರಿಯ ಕೌಂಟಿ ಕ್ರಿಕೆಟ್ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ ಡರ್ಹಾಮ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಮೊಣಕಾಲಿಗೆ ಉಂಟಾಗಿದ್ದ ಗಾಯದ ಪರಿಣಾಮ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೀಗ ವೈದ್ಯಕೀಯ ವರದಿಯಲ್ಲಿ ಅವರ ಗಾಯವು ಗಂಭೀರ ಎಂದು ತಿಳಿದು ಬಂದಿದೆ. ಅಲ್ಲದೆ ವೈದ್ಯರು ಹೆಚ್ಚಿನ ವಿಶ್ರಾಂತಿಯನ್ನು ಸೂಚಿಸಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ, ಪೃಥ್ವಿ ಶಾ ಕನಿಷ್ಠ ಮೂರು ತಿಂಗಳ ಕಾಲ ಮೈದಾನದಿಂದ ಹೊರಗುಳಿಯುವುದು ಖಚಿತ. ಇದರಿಂದ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಅವರು ಅಲಭ್ಯರಾಗಲಿದ್ದಾರೆ. ಹಾಗೆಯೇ ವಿಜಯ್ ಹಜಾರೆ ಟ್ರೋಫಿಯಲ್ಲೂ ಕಣಕ್ಕಿಳಿಯುವುದು ಅನುಮಾನ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧಿಕಾರಿಗಳ ಮಾಹಿತಿ ಪ್ರಕಾರ, ಯುವ ಬ್ಯಾಟರ್ ಸೈಯದ್ ಮುಷ್ತಾಕ್ ಅಲಿ (ಅಕ್ಟೋಬರ್ 16 ರಿಂದ ನವೆಂಬರ್ 23) ಮತ್ತು ವಿಜಯ್ ಹಜಾರೆ (ನವೆಂಬರ್ 23- ಡಿಸೆಂಬರ್) ಟೂರ್ನಿಗಳಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ.
ಇನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರೆ ಜನವರಿ 5 ರಿಂದ ಶುರುವಾಗಲಿರುವ ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಂಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರೊಂದಿಗೆ ಮುಂದಿನ ಮೂರು ತಿಂಗಳು ಪೃಥ್ವಿ ಶಾ ಮೈದಾನದಿಂದ ಹೊರಗುಳಿಯುವುದು ಕೂಡ ಬಹುತೇಕ ಖಚಿತವಾದಂತಾಗಿದೆ. ಒಟ್ಟಿನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಯುವ ಆಟಗಾರನಿಗೆ ಇದೀಗ ಗಾಯವು ಶಾಪವಾಗಿ ಪರಿಣಮಿಸಿರುವುದು ಮಾತ್ರ ವಿಪರ್ಯಾಸ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್ಗಳ ಪಟ್ಟಿ ಇಲ್ಲಿದೆ
ಏಕೆಂದರೆ ಕಳಪೆ ಫಾರ್ಮ್ನಲ್ಲಿದ್ದ ಪೃಥ್ವಿ ಶಾ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ್ದರು. ಅಲ್ಲದೆ ಓನ್ ಡೇ ಕಪ್ ಟೂರ್ನಿಯಲ್ಲಿ ನಾರ್ಥಾಂಪ್ಟನ್‌ಶೈರ್ ತಂಡ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅತ್ಯುತ್ತಮ ಹೊಡೆತಗಳ ಮೂಲಕ ಫಾರ್ಮ್ ಕಂಡುಕೊಂಡಿದ್ದ ಪೃಥ್ವಿ 4 ಪಂದ್ಯಗಳಲ್ಲಿ 1 ದ್ವಿಶತಕ ಹಾಗೂ 1 ಶತಕದೊಂದಿಗೆ ಒಟ್ಟು 429 ರನ್ ಚಚ್ಚಿದ್ದರು. ಆದರೆ ಫಾರ್ಮ್ಗೆ ಮರಳಿದ ಬೆನ್ನಲ್ಲೇ ಇದೀಗ ಗಾಯಗೊಂಡು ಮೂರು ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಗಿ ಬಂದಿದೆ.