PSL 2023: 5 ಭರ್ಜರಿ ಸಿಕ್ಸ್, 20 ಫೋರ್: ಜೇಸನ್ ರಾಯ್ ತೂಫಾನ್ ಶತಕಕ್ಕೆ ದಾಖಲೆಗಳು ಧೂಳೀಪಟ

| Updated By: ಝಾಹಿರ್ ಯೂಸುಫ್

Updated on: Mar 09, 2023 | 5:05 PM

Jason Roy Records: 241 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಇರಾದೆಯೊಂದಿಗೆ ಕಣಕ್ಕಿಳಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಮಾರ್ಟಿನ್ ಗಪ್ಟಿಲ್ ತೂಫಾನ್ ಆರಂಭ ಒದಗಿಸಿದ್ದರು.

PSL 2023: 5 ಭರ್ಜರಿ ಸಿಕ್ಸ್, 20 ಫೋರ್: ಜೇಸನ್ ರಾಯ್ ತೂಫಾನ್ ಶತಕಕ್ಕೆ ದಾಖಲೆಗಳು ಧೂಳೀಪಟ
PSL Batters
Follow us on

PSL 2023: ಪಾಕಿಸ್ತಾನ್ ಸೂಪರ್​ ಲೀಗ್​ನಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ (Jason Roy) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಯ ರನ್​ ಚೇಸಿಂಗ್ ಮೂಲಕ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಪಿಎಸ್​ಎಲ್​​ನ 25ನೇ ಪಂದ್ಯದಲ್ಲಿ ಪೇಶಾವರ್​ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೇಶಾವರ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೇಶಾವರ್ ಝಲ್ಮಿಗೆ ಸೈಮ್ ಅಯ್ಯುಬ್ ಹಾಗೂ ಬಾಬರ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಈ ಜೋಡಿಯು ಮೊದಲ ವಿಕೆಟ್​ಗೆ 13.3 ಓವರ್​ಗಳಲ್ಲಿ 162 ರನ್​ ಕಲೆಹಾಕಿತು. ಈ ಹಂತದಲ್ಲಿ 34 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 74 ರನ್​ ಬಾರಿಸಿದ್ದ ಅಯ್ಯುಬ್ ಔಟಾದರು.

ಇದಾಗ್ಯೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಬಾಬರ್ ಆಝಂ ಸ್ಪೋಟಕ ಶತಕ ಸಿಡಿಸಿದರು. ಅಲ್ಲದೆ ರೋವ್​ಮನ್ ಪೊವೆಲ್ (35) ಜೊತೆಗೂಡಿ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಂತಿಮವಾಗಿ 65 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 15 ಫೋರ್​ನೊಂದಿಗೆ 115 ರನ್​ ಬಾರಿಸಿ ಬಾಬರ್ ನಿರ್ಗಮಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಪೇಶಾವರ್ ಝಲ್ಮಿ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 240 ರನ್​ ಕಲೆಹಾಕಿತು.

241 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಇರಾದೆಯೊಂದಿಗೆ ಕಣಕ್ಕಿಳಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಮಾರ್ಟಿನ್ ಗಪ್ಟಿಲ್ ತೂಫಾನ್ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಸಿಡಿಲಬ್ಬರ ಶುರು ಮಾಡಿದ್ದ ಈ ಜೋಡಿ ಪೇಶಾವರ್ ತಂಡದ ಬೌಲರ್​ಗಳ ಬೆಂಡೆತ್ತಿದ್ದರು. ಪರಿಣಾಮ 2.5 ಓವರ್​ಗಳಲ್ಲಿ ತಂಡದ ಮೊತ್ತ 41 ಕ್ಕೇರಿತು. ಈ ಹಂತದಲ್ಲಿ 21 ರನ್​ಗಳಿಸಿದ್ದ ಮಾರ್ಟಿನ್ ಗಪ್ಟಿಲ್ ಔಟಾದರು.

ಇದನ್ನೂ ಓದಿ
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಗಪ್ಟಿಲ್ ನಿರ್ಗಮನದ ಬಳಿಕವೂ ಅಬ್ಬರ ಮುಂದುವರೆಸಿದ ಜೇಸನ್ ರಾಯ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದರು. ಪರಿಣಾಮ ಇಂಗ್ಲೆಂಡ್ ಆಟಗಾರನ ಬ್ಯಾಟ್​ನಿಂದ 5 ಭರ್ಜರಿ ಸಿಕ್ಸ್ ಹಾಗೂ 20 ಫೋರ್​ಗಳು ಮೂಡಿಬಂತು. ಅಲ್ಲದೆ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದರು.

ಇತ್ತ ಜೇಸನ್ ರಾಯ್ ಅಬ್ಬರ ಮುಂದೆ ಹೈರಾಣರಾದ ಪೇಶಾವರ್ ಬೌಲರ್​ಗಳು ಲಯ ತಪ್ಪಿದರು. ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ರಾಯ್ ರನ್​ ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ 26 ರನ್​ಗಳಿಸಿ ವಿಲ್ ಸ್ಮೀಡ್ ಕೂಡ ಉಪಯುಕ್ತ ಕಾಣಿಕೆ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅನುಭವಿ ಆಟಗಾರ ಮೊಹಮ್ಮದ್ ಹಫೀಸ್ ಜೇಸನ್ ರಾಯ್ ಸಿಡಿಲಬ್ಬರಕ್ಕೆ ಸಾಥ್ ನೀಡಿದರು.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಒಂದೆಡೆ ರಾಯ್ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆ ಮೊಹಮ್ಮದ್ ಹಫೀಸ್ 18 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 41 ರನ್​ ಚಚ್ಚಿದರು. ಇತ್ತ ಜೇಸನ್ ರಾಯ್ 63 ಎಸೆತಗಳಲ್ಲಿ ಅಜೇಯ 145 ರನ್​ ಬಾರಿಸುವ ಮೂಲಕ ಕೇವಲ 18.2 ಓವರ್​ಗಳಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ (243 ರನ್​) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಬೃಹತ್ ಮೊತ್ತ ಚೇಸ್ ಮಾಡಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಪಿಎಸ್​ಎಲ್​ನಲ್ಲಿ ಹೊಸ ದಾಖಲೆ:

ಪೇಶಾವರ್ ಝಲ್ಮಿ ವಿರುದ್ಧದ ಸ್ಪೋಟಕ ಸೆಂಚುರಿಯೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಜೇಸನ್ ರಾಯ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕಾಲಿನ್ ಇನ್​ಗ್ರಾಮ್ ಹೆಸರಿನಲ್ಲಿತ್ತು.
2019 ರಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಇನ್​ಗ್ರಾಮ್ ಕೇವಲ 59 ಎಸೆತಗಳಲ್ಲಿ ಅಜೇಯ 127 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 63 ಎಸೆತಗಳಲ್ಲಿ ಅಜೇಯ 145 ರನ್​ ಬಾರಿಸುವ ಮೂಲಕ ಜೇಸನ್ ರಾಯ್ ಪಾಕಿಸ್ತಾನ್ ಸೂಪರ್​ ಲೀಗ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್​ನ ಟಾಪ್-5 ಶತಕಗಳು:

  • 1- ಜೇಸನ್ ರಾಯ್ (ಕ್ವೆಟ್ಟಾ ಗ್ಲಾಡಿಯೇಟರ್ಸ್​)- ಅಜೇಯ 145 ರನ್ (63 ಎಸೆತಗಳು)
  • 2- ಕಾಲಿನ್ ಇನ್​ಗ್ರಾಮ್ (ಕರಾಚಿ ಕಿಂಗ್ಸ್​)- ಅಜೇಯ 127 ರನ್​ (59 ಎಸೆತಗಳು)
  • 3- ಕ್ಯಾಮರೊನ್ ಡಿಪೋರ್ಟ್ (ಇಸ್ಲಾಮಾಬಾದ್ ಯುನೈಟೆಡ್)- ಅಜೇಯ 117 ರನ್ (60 ಎಸೆತಗಳು)
  • 4- ಶರ್ಜೀಲ್ ಖಾನ್ (ಇಸ್ಲಾಮಾಬಾದ್ ಯುನೈಟೆಡ್)- 117 ರನ್​ (62 ಎಸೆತಗಳು)
  • 5- ಮಾರ್ಟಿನ್ ಗಪ್ಟಿಲ್ (ಕ್ವೆಟ್ಟಾ ಗ್ಲಾಡಿಯೇಟರ್ಸ್​)- 117 ರನ್​ (67 ಎಸೆತಗಳು)

 

 

 

Published On - 5:05 pm, Thu, 9 March 23