ಬರೋಬ್ಬರಿ 116 ಮೀಟರ್; ಸ್ಟೆಡಿಯಂ ದಾಟಿ ರಸ್ತೆಗೆ ಬಂದು ಬಿದ್ದ ಪೊವೆಲ್ ಭಾರಿಸಿದ ಸಿಕ್ಸರ್! ವಿಡಿಯೋ ವೈರಲ್
PSL 2023: ಈ ಪಂದ್ಯದಲ್ಲಿ ಪೇಶಾವರ ತಂಡ 241 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ್ದರ ಹೊರತಾಗಿಯೂ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು.

ಫೋರ್ ಮತ್ತು ಸಿಕ್ಸರ್ಗಳ ಅಬ್ಬರವಿಲ್ಲದೆ ಟಿ20 ಕ್ರಿಕೆಟ್ (T20 cricket) ಪಂದ್ಯ ಪೂರ್ಣವಾಗುವುದೆ ಇಲ್ಲ. ಬೌಲರ್‌ಗಳು ಎಷ್ಟೇ ಅದ್ಭುತವಾಗಿ ಬೌಲಿಂಗ್ ಮಾಡಿದರೂ ಇಲ್ಲಿ ಬ್ಯಾಟ್ಸ್‌ಮನ್‌ಗಳೇ ಮೇಲುಗೈ ಸಾಧಿಸುತ್ತಾರೆ. ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‌ಎಲ್‌ನಲ್ಲೂ (PSL) ಅದೇ ರೀತಿಯ ಪ್ರದರ್ಶನ ಕಂಡುಬರುತ್ತಿದೆ. ಈ ಲೀಗ್ನಲ್ಲಿ ಕೆಲವೊಮ್ಮೆ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರೆ, ಇನ್ನು ಕೆಲವೊಮ್ಮೆ ಬ್ಯಾಟರ್ಗಳು ಅಬ್ಬರಿಸುವ ಮೂಲಕ ಬೃಹತ್ ಟಾರ್ಗೆಟ್ ಸೆಟ್ ಮಾಡುತ್ತಿದ್ದಾರೆ. ಅದರಲ್ಲೂ ಬೃಹತ್ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದಾರೆ. ಅಂತಹದೊಂದು ಬಿಗ್ ಸಿಕ್ಸರ್ ಬಾರಿಸುವುದರೊಂದಿಗೆ ವಿಂಡೀಸ್ ಆಟಗಾರ ರೋವ್‌ಮನ್ ಪೊವೆಲ್ (Rovman Powell) ದಾಖಲೆ ಸೃಷ್ಟಿಸಿದ್ದಾರೆ.
ಬರೋಬ್ಬರಿ 116 ಮೀಟರ್ ಉದ್ದದ ಬೃಹತ್ ಸಿಕ್ಸರ್
ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಪ್ರತಿನಿಧಿಸುತ್ತಿರುವ ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕ ರೋವ್‌ಮನ್ ಪೊವೆಲ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 35 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಕೂಡ ಸೇರಿದ್ದವು. ಆದರೆ ಈ ಎರಡು ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ಮಾತ್ರ ಇಡೀ ಮೈದಾನವೇ ನಿಬ್ಬೆರಗಾಗುವಂತೆ ಮಾಡಿತು. ಗ್ಲಾಡಿಯೇಟರ್ಸ್ ತಂಡದ ಬೌಲರ್ ಮೊಹಮ್ಮದ್ ನವಾಜ್ ಎಸೆದ 15ನೇ ಓವರ್ನ ಮೊದಲ ಎಸೆತದಲ್ಲಿ ಬರೋಬ್ಬರಿ 116 ಮೀಟರ್‌ಗಳ ಉದ್ದದ ಬೃಹತ್ ಸಿಕ್ಸರ್ ಬಾರಿಸಿದ ಪೊವೆಲ್ ಲೀಗ್ನಲ್ಲಿ ದಾಖಲೆ ಸೃಷ್ಟಿಸಿದರು.
NZ vs SL: ಮ್ಯಾಥ್ಯೂಸ್ ದಾಖಲೆಯ ಆಟ; ಬಲಿಷ್ಠ ಆರಂಭ ಪಡೆದ ಲಂಕಾ; ಭಾರತಕ್ಕೆ ತಳಮಳ
ಪೊವೆಲ್ ಬಾರಿಸಿದ ಈ ಚೆಂಡು ಕ್ರೀಡಾಂಗಣದಿಂದ ಹೊರಗೆ ಹೋಗಿ ಬಿದ್ದಿದ್ದರಿಂದ ಅಂಪೈರ್ ಹೊಸ ಬಾಲ್ ಮೊರೆ ಹೋಗಬೇಕಾಯಿತು. ಇತ್ತ ಬೃಹತ್ ಸಿಕ್ಸರ್ ಹೊಡೆಸಿಕೊಂಡ ನವಾಜ್ ಸ್ವಲ್ಪ ಹೊತ್ತು ಶಾಕ್ ಆಗಿ ನಿಂತು ಬಿಟ್ಟರು. ವಾಸ್ತವವಾಗಿ ಪೊವೆಲ್ ಬಾರಿಸಿದ ಸಿಕ್ಸರ್ ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್‌ಗಳಲ್ಲಿ ಒಂದಾಯಿತು. ಪೊವೆಲ್ ಬಾರಿಸಿದ ಬೃಹತ್ ಸಿಕ್ಸರ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Rovman Powell, what a shot ? #HBLPSL8 pic.twitter.com/hrJaON9hLL
— Farid Khan (@_FaridKhan) March 8, 2023
241 ರನ್ ಬಾರಿಸಿದರೂ ಸೋಲು
ಇನ್ನು ಪಂದ್ಯದ ವಿಷಯಕ್ಕೆ ಬಂದರೆ ಈ ಪಂದ್ಯದಲ್ಲಿ ಪೇಶಾವರ ತಂಡ 241 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ್ದರ ಹೊರತಾಗಿಯೂ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. 241 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕ್ವೆಟ್ಟಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೇಸನ್ ರಾಯ್ 63 ಎಸೆತಗಳಲ್ಲಿ 145 ರನ್‌ಗಳ ಸುನಾಮಿ ಶತಕ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು. ಇದೇ ಪಂದ್ಯದಲ್ಲಿ ಪೇಶಾವರ ಝಲ್ಮಿ ತಂಡದ ನಾಯಕ ಬಾಬರ್ ಅಜಮ್ ಕೂಡ ಸೂಪರ್ ಶತಕ ಬಾರಿಸಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 65 ಎಸೆತಗಳನ್ನು ಎದುರಿಸಿದ ಬಾಬರ್ 15 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 115 ರನ್ ಚಚ್ಚಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Thu, 9 March 23
