PSL 2023: 5 ಭರ್ಜರಿ ಸಿಕ್ಸ್, 20 ಫೋರ್: ಜೇಸನ್ ರಾಯ್ ತೂಫಾನ್ ಶತಕಕ್ಕೆ ದಾಖಲೆಗಳು ಧೂಳೀಪಟ
Jason Roy Records: 241 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಇರಾದೆಯೊಂದಿಗೆ ಕಣಕ್ಕಿಳಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಮಾರ್ಟಿನ್ ಗಪ್ಟಿಲ್ ತೂಫಾನ್ ಆರಂಭ ಒದಗಿಸಿದ್ದರು.
PSL 2023: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ (Jason Roy) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಯ ರನ್ ಚೇಸಿಂಗ್ ಮೂಲಕ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಪಿಎಸ್ಎಲ್ನ 25ನೇ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೇಶಾವರ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೇಶಾವರ್ ಝಲ್ಮಿಗೆ ಸೈಮ್ ಅಯ್ಯುಬ್ ಹಾಗೂ ಬಾಬರ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಈ ಜೋಡಿಯು ಮೊದಲ ವಿಕೆಟ್ಗೆ 13.3 ಓವರ್ಗಳಲ್ಲಿ 162 ರನ್ ಕಲೆಹಾಕಿತು. ಈ ಹಂತದಲ್ಲಿ 34 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ 74 ರನ್ ಬಾರಿಸಿದ್ದ ಅಯ್ಯುಬ್ ಔಟಾದರು.
ಇದಾಗ್ಯೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಬಾಬರ್ ಆಝಂ ಸ್ಪೋಟಕ ಶತಕ ಸಿಡಿಸಿದರು. ಅಲ್ಲದೆ ರೋವ್ಮನ್ ಪೊವೆಲ್ (35) ಜೊತೆಗೂಡಿ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಂತಿಮವಾಗಿ 65 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 15 ಫೋರ್ನೊಂದಿಗೆ 115 ರನ್ ಬಾರಿಸಿ ಬಾಬರ್ ನಿರ್ಗಮಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಪೇಶಾವರ್ ಝಲ್ಮಿ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿತು.
241 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಇರಾದೆಯೊಂದಿಗೆ ಕಣಕ್ಕಿಳಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಮಾರ್ಟಿನ್ ಗಪ್ಟಿಲ್ ತೂಫಾನ್ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಸಿಡಿಲಬ್ಬರ ಶುರು ಮಾಡಿದ್ದ ಈ ಜೋಡಿ ಪೇಶಾವರ್ ತಂಡದ ಬೌಲರ್ಗಳ ಬೆಂಡೆತ್ತಿದ್ದರು. ಪರಿಣಾಮ 2.5 ಓವರ್ಗಳಲ್ಲಿ ತಂಡದ ಮೊತ್ತ 41 ಕ್ಕೇರಿತು. ಈ ಹಂತದಲ್ಲಿ 21 ರನ್ಗಳಿಸಿದ್ದ ಮಾರ್ಟಿನ್ ಗಪ್ಟಿಲ್ ಔಟಾದರು.
ಗಪ್ಟಿಲ್ ನಿರ್ಗಮನದ ಬಳಿಕವೂ ಅಬ್ಬರ ಮುಂದುವರೆಸಿದ ಜೇಸನ್ ರಾಯ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದರು. ಪರಿಣಾಮ ಇಂಗ್ಲೆಂಡ್ ಆಟಗಾರನ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 20 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದರು.
ಇತ್ತ ಜೇಸನ್ ರಾಯ್ ಅಬ್ಬರ ಮುಂದೆ ಹೈರಾಣರಾದ ಪೇಶಾವರ್ ಬೌಲರ್ಗಳು ಲಯ ತಪ್ಪಿದರು. ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ರಾಯ್ ರನ್ ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ 26 ರನ್ಗಳಿಸಿ ವಿಲ್ ಸ್ಮೀಡ್ ಕೂಡ ಉಪಯುಕ್ತ ಕಾಣಿಕೆ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅನುಭವಿ ಆಟಗಾರ ಮೊಹಮ್ಮದ್ ಹಫೀಸ್ ಜೇಸನ್ ರಾಯ್ ಸಿಡಿಲಬ್ಬರಕ್ಕೆ ಸಾಥ್ ನೀಡಿದರು.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಒಂದೆಡೆ ರಾಯ್ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆ ಮೊಹಮ್ಮದ್ ಹಫೀಸ್ 18 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 41 ರನ್ ಚಚ್ಚಿದರು. ಇತ್ತ ಜೇಸನ್ ರಾಯ್ 63 ಎಸೆತಗಳಲ್ಲಿ ಅಜೇಯ 145 ರನ್ ಬಾರಿಸುವ ಮೂಲಕ ಕೇವಲ 18.2 ಓವರ್ಗಳಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ (243 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಬೃಹತ್ ಮೊತ್ತ ಚೇಸ್ ಮಾಡಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಪಿಎಸ್ಎಲ್ನಲ್ಲಿ ಹೊಸ ದಾಖಲೆ:
ಪೇಶಾವರ್ ಝಲ್ಮಿ ವಿರುದ್ಧದ ಸ್ಪೋಟಕ ಸೆಂಚುರಿಯೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಜೇಸನ್ ರಾಯ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕಾಲಿನ್ ಇನ್ಗ್ರಾಮ್ ಹೆಸರಿನಲ್ಲಿತ್ತು. 2019 ರಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಇನ್ಗ್ರಾಮ್ ಕೇವಲ 59 ಎಸೆತಗಳಲ್ಲಿ ಅಜೇಯ 127 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 63 ಎಸೆತಗಳಲ್ಲಿ ಅಜೇಯ 145 ರನ್ ಬಾರಿಸುವ ಮೂಲಕ ಜೇಸನ್ ರಾಯ್ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್ನ ಟಾಪ್-5 ಶತಕಗಳು:
- 1- ಜೇಸನ್ ರಾಯ್ (ಕ್ವೆಟ್ಟಾ ಗ್ಲಾಡಿಯೇಟರ್ಸ್)- ಅಜೇಯ 145 ರನ್ (63 ಎಸೆತಗಳು)
- 2- ಕಾಲಿನ್ ಇನ್ಗ್ರಾಮ್ (ಕರಾಚಿ ಕಿಂಗ್ಸ್)- ಅಜೇಯ 127 ರನ್ (59 ಎಸೆತಗಳು)
- 3- ಕ್ಯಾಮರೊನ್ ಡಿಪೋರ್ಟ್ (ಇಸ್ಲಾಮಾಬಾದ್ ಯುನೈಟೆಡ್)- ಅಜೇಯ 117 ರನ್ (60 ಎಸೆತಗಳು)
- 4- ಶರ್ಜೀಲ್ ಖಾನ್ (ಇಸ್ಲಾಮಾಬಾದ್ ಯುನೈಟೆಡ್)- 117 ರನ್ (62 ಎಸೆತಗಳು)
- 5- ಮಾರ್ಟಿನ್ ಗಪ್ಟಿಲ್ (ಕ್ವೆಟ್ಟಾ ಗ್ಲಾಡಿಯೇಟರ್ಸ್)- 117 ರನ್ (67 ಎಸೆತಗಳು)
Published On - 5:05 pm, Thu, 9 March 23