PSL ಪ್ರಾರಂಭವಾಗಲು ಕೆಲವೇ ಗಂಟೆಗಳಿರುವಾಗ ಟೂರ್ನಿಯಿಂದ ಹಿಂದೆ ಸರಿದ ಆಸೀಸ್ ಸ್ಟಾರ್ ಬ್ಯಾಟರ್
Pakistan Super League 2025: ಪಾಕಿಸ್ತಾನ ಸೂಪರ್ ಲೀಗ್ (PSL)ನ 10ನೇ ಆವೃತ್ತಿ ಇಂದಿನಿಂದ ಆರಂಭವಾಗಿದೆ. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಈ ಲೀಗ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಇದು ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಆಘಾತ ತಂದೊಡ್ಡಿದೆ.

10ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL) ಇಂದಿನಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯವು ಇಸ್ಲಾಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಖಲಂದರ್ ನಡುವೆ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು, ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ (Alex Carey) ಲೀಗ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಿಂದಾಗಿ ಅವರು ಪಿಎಸ್‌ಎಲ್‌ನಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬದಲಿಗೆ ಅಲೆಕ್ಸ್ ಕ್ಯಾರಿ ಅವರನ್ನು ಇಸ್ಲಾಮಾಬಾದ್ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ದೇಶೀಯ ಪಂದ್ಯಗಳ ಬದ್ಧತೆಯಿಂದಾಗಿ ಪಂದ್ಯಾವಳಿಗೆ ಲಭ್ಯವಿರುವುದಿಲ್ಲ ಎಂದು ಹೇಳುವ ಮೂಲಕ ಕ್ಯಾರಿ ಪಿಎಸ್‌ಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಬದಲಿಯಾಗಿ ಬಂದಿದ್ದ ಅಲೆಕ್ಸ್ ಕ್ಯಾರಿ
3 ಬಾರಿ ಪಿಎಸ್ಎಲ್ ಪ್ರಶಸ್ತಿ ಗೆದ್ದಿರುವ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಈ ಮೊದಲು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಅವರು ಪಂದ್ಯಾವಳಿಯಿಂದ ಹಿಂದೆ ಸರಿಯಲಿ ನಿರ್ಧರಿಸಿದ್ದರಿಂದ ಅವರ ಬದಲಿಗೆ ಅಲೆಕ್ಸ್ ಕ್ಯಾರಿ ಅವರನ್ನು ತಂಡಕ್ಕೆ ಕರೆತರಲಾಗಿತ್ತು. ಆದರೀಗ ಅಲೆಕ್ಸ್ ಕ್ಯಾರಿ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರೇ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ತಂಡಕ್ಕೆ ಸೇರಿಕೊಳ್ಳುವುದಾಗಿ ಡುಸ್ಸೆನ್ ಅವರೇ ಈಗಾಗಲೇ ದೃಢೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ, ಪಾಕಿಸ್ತಾನಿ ಕ್ರಿಕೆಟಿಗ ಹಸನ್ ಅಲಿ, ಪಿಎಸ್ಎಲ್ ಪ್ರಾರಂಭವಾದ ನಂತರ ಜನರು ಐಪಿಎಲ್ ನೋಡುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದ್ದರು. ಆದರೆ ವಿದೇಶಿ ಆಟಗಾರರು ನಿರಂತರವಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದು ಪಿಎಸ್‌ಎಲ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದ ಕಾರ್ಬಿನ್ ಬಾಷ್
ಅಲೆಕ್ಸ್ ಕ್ಯಾರಿ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಆಟಗಾರ ಕಾರ್ಬಿನ್ ಬಾಷ್ ಐಪಿಎಲ್‌ನಲ್ಲಿ ಆಡಲು ಪಿಎಸ್‌ಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರ ಮೇಲೆ ಒಂದು ವರ್ಷದ ನಿಷೇಧ ಮತ್ತು ದಂಡ ವಿಧಿಸಿದೆ. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ ಬಾಷ್, ಜನವರಿ 13 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಆಟಗಾರರ ಡ್ರಾಫ್ಟ್‌ನ 10 ನೇ ಸುತ್ತಿನ ಸಂದರ್ಭದಲ್ಲಿ ಪೇಶಾವರ್ ಝಲ್ಮಿಯಿಂದ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾಗಿದ್ದರು. ಆದರೆ ಮಾರ್ಚ್ ಆರಂಭದಲ್ಲಿ ಮುಂಬೈ ಇಂಡಿಯನ್ಸ್, ಗಾಯಗೊಂಡ ದಕ್ಷಿಣ ಆಫ್ರಿಕಾದ ಲಿಜಾರ್ಡ್ ವಿಲಿಯಮ್ಸ್ ಬದಲಿಗೆ ಬಾಷ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತು. ಇದಾದ ನಂತರ, ಬಾಷ್ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿ ಪಿಎಸ್‌ಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದಕ್ಷಿಣ ಆಫ್ರಿಕಾದ ಈ ಆಲ್‌ರೌಂಡರ್‌ಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು.
ಪಿಎಸ್‌ಎಲ್ ವೇಳಾಪಟ್ಟಿ
ಪಿಎಸ್‌ಎಲ್‌ನ 10 ನೇ ಸೀಸನ್‌ನಲ್ಲಿ 6 ತಂಡಗಳು ಒಟ್ಟು 34 ಪಂದ್ಯಗಳನ್ನು ಆಡಲಿವೆ. ಏಪ್ರಿಲ್ 11 ರಿಂದ ಲೀಗ್ ಆರಂಭವಾಗಲಿದೆ. ಫೈನಲ್ ಪಂದ್ಯ ಮೇ 18 ರಂದು ನಡೆಯಲಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ 13 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಎರಡು ಎಲಿಮಿನೇಟರ್‌ಗಳು ಮತ್ತು ಫೈನಲ್ ಸೇರಿವೆ. ರಾವಲ್ಪಿಂಡಿಯಲ್ಲಿ 11 ಪಂದ್ಯಗಳು ನಡೆಯಲಿದ್ದು, ಮೊದಲ ಕ್ವಾಲಿಫೈಯರ್ ಮೇ 13 ರಂದು ನಡೆಯಲಿದೆ. ಕರಾಚಿ ಮತ್ತು ಮುಲ್ತಾನ್‌ನಲ್ಲಿ ತಲಾ ಐದು ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯು ಮೂರು ಡಬಲ್-ಹೆಡರ್ ಪಂದ್ಯಗಳನ್ನು ಸಹ ಒಳಗೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ