
ಕಳೆದೊಂದು ವರ್ಷದಿಂದ ಬಿಸಿಸಿಐ (BCCI) ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಾ ಪ್ರತಿಯೊಂದರಲ್ಲೂ ಪೈಪೋಟಿ ನೀಡಲು ಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಗಾಳಿಯೊಂದಿಗೆ ಗುದ್ದಾಡುವ ಕೆಲಸಕ್ಕೆ ಕೈಹಾಕಿದೆ. ಐಪಿಎಲ್ಗೆ (IPL) ಸೆಡ್ಡು ಹೊಡೆಯುವ ಸಲವಾಗಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಆರಂಭಿಸಿದ್ದ ಪಿಸಿಬಿ, ಇದೀಗ ಈ ಮಿಲಿಯನ್ ಡಾಲರ್ ಟೂರ್ನಿಯೊಂದಿಗೆ ರೇಸಿಗಿಳಿಯಲು ತಯಾರಿ ನಡೆಸಿದೆ. ವಾಸ್ತವವಾಗಿ ಪಿಸಿಎಲ್ನ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಇಂದು ಪಿಸಿಬಿ ಬಿಡುಗಡೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಐಪಿಎಲ್ ಮಧ್ಯದಲ್ಲಿಯೇ ಪಿಎಸ್ಎಲ್ ಆರಂಭವಾಗುತ್ತಿದೆ. ಪಿಎಸ್ಎಲ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಪಂದ್ಯಾವಳಿಯ ಅಂತಿಮ ಪಂದ್ಯ ಮೇ 18 ರಂದು ನಡೆಯಲಿದೆ. ಮತ್ತೊಂದೆಡೆ, ಐಪಿಎಲ್ ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಮೇ 25 ರಂದು ನಡೆಯಲಿದೆ. ಇದನ್ನು ನೋಡಿದರೆ, ಪಿಸಿಬಿ ಈ ವೇಳಾಪಟ್ಟಿಯೊಂದಿಗೆ ಬಿಸಿಸಿಐಗೆ ಸವಾಲು ಹಾಕಲು ಪ್ರಯತ್ನಿಸಿದೆ ಎಂದು ತೋರುತ್ತದೆ.
ಪಾಕಿಸ್ತಾನ ಸೂಪರ್ ಲೀಗ್ 2025 ರ ಮೊದಲ ಪಂದ್ಯವು ರಾವಲ್ಪಿಂಡಿಯಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಖಲಂದರ್ ನಡುವೆ ನಡೆಯಲಿದೆ. ಈ ಆವೃತ್ತಿಯ ಪಂದ್ಯಗಳು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲ್ಲಿದ್ದು, ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ನಡೆಯಲಿವೆ. ಇದರ ನಂತರ, ಅರ್ಹತಾ ಪಂದ್ಯಗಳು ಮೇ 13 ರಂದು ನಡೆದರೆ, ಮೊದಲ ಎಲಿಮಿನೇಟರ್ ಪಂದ್ಯ ಮೇ 14 ರಂದು ಮತ್ತು ಎರಡನೇ ಎಲಿಮಿನೇಟರ್ ಪಂದ್ಯ ಮೇ 16 ರಂದು ನಡೆಯಲಿವೆ. ಪಂದ್ಯಾವಳಿಯ ಫೈನಲ್ ಪಂದ್ಯವು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವೇಳಾಪಟ್ಟಿಯ ಪ್ರಕಾರ ರಾವಲ್ಪಿಂಡಿಯಲ್ಲಿ 11 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೇ 13 ರಂದು ನಡೆಯುವ ಪಂದ್ಯಾವಳಿಯ ಮೊದಲ ಪಂದ್ಯ ಮತ್ತು ಕ್ವಾಲಿಫೈಯರ್ 1 ಪಂದ್ಯ ಸೇರಿವೆ. ಹಾಗೆಯೇ ಲಾಹೋರ್‌ನಲ್ಲಿ 13 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಎರಡು ಎಲಿಮಿನೇಟರ್‌ಗಳು ಮತ್ತು ಒಂದು ಫೈನಲ್ ಪಂದ್ಯ ಸೇರಿದೆ. ಇದಲ್ಲದೆ, ಕರಾಚಿ ಮತ್ತು ಮುಲ್ತಾನ್ ತಲಾ 5 ಪಂದ್ಯಗಳ ಆತಿಥ್ಯವನ್ನು ಪಡೆದಿವೆ. ಈ ಆವೃತ್ತಿಯಲ್ಲಿ ಮೂರು ಡಬಲ್-ಹೆಡರ್ ಪಂದ್ಯಗಳು ಇರುತ್ತವೆ.
The #HBLPSLX match schedule is here!
🔊 Here’s what you need to know about the exciting action ahead 🏏
📺 WATCH 👉 https://t.co/9ubVDVeHl2#HBLPSL10 l #DECADEOFHBLPSL pic.twitter.com/LnNPLwG7XQ
— Pakistan Cricket (@TheRealPCB) February 28, 2025
ಸಾಮಾನ್ಯವಾಗಿ ಪಾಕಿಸ್ತಾನ ಸೂಪರ್ ಲೀಗ್ ಯಾವಾಗಲೂ ಜನವರಿಯಿಂದ ಮಾರ್ಚ್ ವರೆಗೆ ನಡೆಯುತ್ತಿತ್ತು. ಇದರಿಂದಾಗಿ ವಿವಿದ ದೇಶಗಳ ಸ್ಟಾರ್ ಆಟಗಾರರು ಕೂಡ ಈ ಲೀಗ್ನಲ್ಲಿ ಆಡುತ್ತಿದ್ದರು. ಏಕೆಂದರೆ ಪಿಎಸ್ಎಲ್ ಮುಗಿದ ಬಳಿಕ ಐಪಿಎಲ್ ಆರಂಭವಾಗುತಿತ್ತು. ಆದರೆ ಈ ಬಾರಿ ಪಿಎಸ್ಎಲ್ ಹಾಗೂ ಐಪಿಎಲ್ ಒಂದೇ ಸಮಯದಲ್ಲಿ ನಡೆಯಲ್ಲಿವೆ. ಹೀಗಾಗಿ ಪಿಎಸ್ಎಲ್ಗೆ ಸ್ಟಾರ್ ಆಟಗಾರರ ಅಲಭ್ಯತೆಯುಂಟಾಗಲಿದೆ. ಅಲ್ಲದೆ ಟಿವಿಯಲ್ಲಿ ಪಾಕಿಸ್ತಾನಿ ಲೀಗ್ ನೋಡುವ ಜನರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಬಹುದು, ಇದು ಪ್ರಸಾರ ಹಕ್ಕುಗಳ ಗಳಿಕೆಯ ಮೇಲೂ ಪರಿಣಾಮ ಬೀರಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Fri, 28 February 25