- Kannada News Photo gallery Cricket photos Pakistan's Champions Trophy Campaign Ends in Rain-Soaked Disappointment
Champions Trophy 2025: ಒಂದು ಪಂದ್ಯವನ್ನು ಗೆಲ್ಲದೆ ಹೊರಬಿದ್ದ ಪಾಕಿಸ್ತಾನಕ್ಕೆ ಸಿಕ್ಕ ಹಣವೆಷ್ಟು?
Champions Trophy 2025: ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಮಳೆಯಿಂದಾಗಿ ಅಂತ್ಯಗೊಂಡಿದೆ. ಬಾಂಗ್ಲಾದೇಶದ ವಿರುದ್ಧದ ಅಂತಿಮ ಪಂದ್ಯ ಮಳೆಯಿಂದ ರದ್ದಾಯಿತು. ಪಾಕಿಸ್ತಾನ ಟೂರ್ನಿಯಲ್ಲಿ ಒಂದೇ ಗೆಲುವು ಸಾಧಿಸದೆ ಕೊನೆಯ ಸ್ಥಾನ ಪಡೆದು 1.22 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಈ ಸೋಲು ಪಾಕಿಸ್ತಾನಕ್ಕೆ ಆರ್ಥಿಕ ಹಾಗೂ ಕ್ರೀಡಾತ್ಮಕವಾಗಿ ದೊಡ್ಡ ಹೊಡೆತ ನೀಡಿದೆ.
Updated on:Mar 02, 2025 | 2:13 PM

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಗ್ರೂಪ್ ಎ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ರಾವಲ್ಪಿಂಡಿಯಲ್ಲಿ ಮಳೆ ಬಂದ ಕಾರಣ ಟಾಸ್ ಕೂಡ ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ, 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನದ ಪ್ರಯಾಣ ಅತ್ಯಂತ ಕೆಟ್ಟ ರೀತಿಯಲ್ಲಿ ಅಂತ್ಯಕಂಡಿದೆ.

ಟೂರ್ನಿಯನ್ನು ಗೆಲ್ಲುವ ತಂಡಗಳ ಪೈಕಿ ಒಂದಾಗಿ ಸ್ಪರ್ಧೆಗಿಳಿದಿದ್ದ ಪಾಕಿಸ್ತಾನಕ್ಕೆ ತನ್ನ ತವರಿನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಪಾಕ್ ಪಡೆ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ, ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ಮೂರನೇ ಪಂದ್ಯ ಮಳೆಯಿಂದ ರದ್ದಾಗಿದೆ.

ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯವನ್ನಾದರೂ ಗೆದ್ದು ತವರಿನ ಅಭಿಮಾನಿಗಳಿಗೆ ಕೊಂಚ ಸಂತೋಷ ನೀಡುವ ಇರಾದೆಯಲ್ಲಿದ್ದ ಪಾಕಿಸ್ತಾನಕ್ಕೆ ವರುಣ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಇತ್ತ ಪಾಯಿಂಟ್ ಪಟ್ಟಿಯಲ್ಲೂ ಆಘಾತ ಎದುರಾಗಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ಗಳಿಂದ ಸೋತಿದ್ದ ಪಾಕಿಸ್ತಾನ, ಆ ಬಳಿಕ ನಡೆದಿದ್ದ ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಇನ್ನು 45 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಸೋತಿತ್ತು. ಹೀಗಾಗಿ -1.09 ನೆಟ್ ರನ್ರೇಟ್ ಹೊಂದಿರುವ ಪಾಕಿಸ್ತಾನ ಎ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಐಸಿಸಿಯಿಂದ ಪಡೆಯುವ ಬಹುಮಾನದ ಮೊತ್ತದಲ್ಲೂ ಪಾಕ್ ಪಡೆಗೆ ಭಾರಿ ನಷ್ಟ ಉಂಟಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ ನಿಗದಿ ಮಾಡಿರುವ ಬಹುಮಾನ ಮೊತ್ತದ ಪ್ರಕಾರ, ಈ ಟೂರ್ನಿ ಗೆಲ್ಲುವ ಚಾಂಪಿಯನ್ ತಂಡಕ್ಕೆ 19.46 ಕೋಟಿ ರೂ. ಬಹುಮಾನ ಸಿಗಲಿದೆ. ಹಾಗೆಯೇ ರನ್ನರ್ ಅಪ್ ತಂಡಕ್ಕೆ 9.73 ಕೋಟಿ ರೂ. ಬಹುಮಾನ ಸಿಗಲಿದೆ. ಸೆಮಿಫೈನಲಿಸ್ಟ್ ತಂಡಕ್ಕೆ 4.86 ಕೋಟಿ ರೂ. ಸಿಕ್ಕರೆ, ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3.04 ಕೋಟಿ ರೂ. ಮತ್ತು ಏಳು ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 1.22 ಕೋಟಿ ರೂ. ಬಹುಮಾನ ನೀಡಲಾಗುವುದು.

ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿರುವುದರ ಜೊತೆಗೆ ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಇನ್ನು ಟೂರ್ನಿಯ ಒಟ್ಟಾರೆ ಪಾಯಿಂಟ್ ಪಟ್ಟಿಯಲ್ಲಿಯೂ ಕೊನೆಯ ಸ್ಥಾನ ಪಡೆದುಕೊಂಡಿರುವ ಪಾಕಿಸ್ತಾನಕ್ಕೆ ಐಸಿಸಿಯಿಂದ ಕೇವಲ 1.22 ಕೋಟಿ ರೂ. ಹಣ ಮಾತ್ರ ಬಹುಮಾನವಾಗಿ ಸಿಗಲಿದೆ.
Published On - 4:59 pm, Thu, 27 February 25



















