Champions Trophy 2025: ಮಳೆಯಿಂದ ಬಾಂಗ್ಲಾದೇಶ- ಪಾಕಿಸ್ತಾನ ಪಂದ್ಯ ರದ್ದು
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಔಪಚಾರಿಕ ಪಂದ್ಯ ಮಳೆಯಿಂದ ರದ್ದಾಯಿತು. ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಂದ್ಯ ಟಾಸ್ ಇಲ್ಲದೆ ರದ್ದಾಯಿತು. ಹೀಗಾಗಿ ಆತಿಥೇಯ ಪಾಕಿಸ್ತಾನ ತಂಡ ಒಂದೇ ಒಂದು ಗೆಲುವು ಸಾಧಿಸದೆ ಟೂರ್ನಿಯಿಂದ ಹೊರಬಿದ್ದಿದೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಕೊನೆಯ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ಅಂತ್ಯಗೊಂಡಿದೆ. ಇದರರ್ಥ ಪಾಕಿಸ್ತಾನ ಕ್ರಿಕೆಟ್ ತಂಡವು ಈ ಪಂದ್ಯಾವಳಿಯಲ್ಲಿ ಗೆಲ್ಲುವ ಕೊನೆಯ ಅವಕಾಶವನ್ನು ಕಳೆದುಕೊಂಡಿದ್ದು, ಯಾವುದೇ ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ. 29 ವರ್ಷಗಳ ನಂತರ, ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಪಡೆದಿದ್ದ ಪಾಕಿಸ್ತಾನ ಕೇವಲ 8 ದಿನಗಳಲ್ಲಿ ತನ್ನ ಪ್ರಯಾಣವನ್ನು ನಾಚಿಕೆಗೇಡಿನ ರೀತಿಯಲ್ಲಿ ಕೊನೆಗೊಳಿಸಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ಎರಡೂ ತಂಡಗಳು ಗ್ರೂಪ್ ಎ ಯ ಭಾಗವಾಗಿದ್ದವು. ಆದರೆ ಈ ಎರಡೂ ತಂಡಗಳು ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದರಿಂದ ಈಗಾಗಲೇ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದಿದ್ದವು. ಹೀಗಾಗಿ ಈ ಪಂದ್ಯ ನಡೆದಿದ್ದರೂ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.
ಪಂದ್ಯಕ್ಕೆ ಮಳೆ ಅಡ್ಡಿ
ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ನಡೆದಿದ್ದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಗಿತ್ತು. ಆ ಪಂದ್ಯವೂ ಕೂಡ ಟಾಸ್ ಕೂಡ ನಡೆಯದೆ ರದ್ದಾಗಿತ್ತು. ಇದೀಗ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ಅಂತ್ಯಗೊಂಡಿದೆ.
ಪಾಕಿಸ್ತಾನಕ್ಕೆ ಕೊನೆಯ ಸ್ಥಾನ
ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕ ಪಡೆದುಕೊಂಡು ಟೂರ್ನಿಗೆ ವಿದಾಯ ಹೇಳಿವೆ. ಬಾಂಗ್ಲಾದೇಶ ತಂಡ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ಇತ್ತ ಪಾಕಿಸ್ತಾನ -1.09 ನೆಟ್ ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ‘ಪಾಕ್ ತಂಡವನ್ನು ನನಗೆ ಕೊಡಿ, ಸಿಂಹಗಳನ್ನಾಗಿ ಮಾಡುತ್ತೇನೆ’; ಯುವಿ ತಂದೆ ಯೋಗರಾಜ್ ಸಿಂಗ್
ಉಭಯ ತಂಡಗಳು
ಪಾಕಿಸ್ತಾನ ತಂಡ: ಇಮಾಮ್-ಉಲ್-ಹಕ್, ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಸಲ್ಮಾನ್ ಅಲಿ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
ಬಾಂಗ್ಲಾದೇಶ ತಂಡ: ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮೆಹದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಷ್ಫಿಕರ್ ರಹೀಮ್, ಮಹ್ಮದುಲ್ಲಾ, ಜಾಕಿರ್ ಅಲಿ, ರಿಷದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ನಹಿದ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Thu, 27 February 25



