IND vs PAK: ಭಾರತದ ವಿರುದ್ಧ ಸೋತ ಪಾಕ್ ತಂಡದಲ್ಲಿ ಬರೋಬ್ಬರಿ 10 ಬದಲಾವಣೆ..!
Pakistan Cricket Crisis: ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ತೀವ್ರ ಟೀಕೆ ಎದುರಿಸುತ್ತಿದೆ. ಕೋಚಿಂಗ್ ಸಿಬ್ಬಂದಿ ಮತ್ತು ಹಲವು ಆಟಗಾರರನ್ನು ತಂಡದಿಂದ ತೆಗೆದುಹಾಕುವ ಸಾಧ್ಯತೆಗಳಿವೆ. ಅವರುಗಳಲ್ಲಿ ಬಾಬರ್ ಆಝಂ, ಮೊಹಮ್ಮದ್ ರಿಜ್ವಾನ್, ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಹಲವು ಆಟಗಾರರು ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಸೋತ ನಂತರ ಪಾಕಿಸ್ತಾನ ತೀವ್ರ ಟೀಕೆ ಎದುರಿಸುತ್ತಿದೆ. ಅಭಿಮಾನಿಗಳಿಂದ ಹಿಡಿದು ಮಾಜಿ ಕ್ರಿಕೆಟಿಗರವರೆಗೆ ಎಲ್ಲರೂ ತಮ್ಮ ಕ್ರಿಕೆಟ್ ತಂಡದ ಬಗ್ಗೆ ತೀವ್ರ ಕೋಪ ಹೊರ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ನಿರಂತರ ಕಳಪೆ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡದ ಕೋಚಿಂಗ್ ಸಿಬ್ಬಂದಿಗಳ ತಲೆದಂಡವಾಗಬಹುದು ಎಂಬ ಚರ್ಚೆಗಳು ಶುರುವಾಗಿದೆ. ಇದರ ಜೊತೆಗೆ ತಂಡ ಅನೇಕ ಆಟಗಾರರನ್ನು ತಂಡದಿಂದ ಕೈಬಿಡಬಹುದು ಎಂದು ಹೇಳಲಾಗುತ್ತಿದೆ.
ಕೋಚಿಂಗ್ ಸಿಬ್ಬಂದಿಯಲ್ಲಿ ಯಾರಿದ್ದಾರೆ?
ಟೀಮ್ ಇಂಡಿಯಾದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್, ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್‌ನ ಕೋಚ್ ಆಗಿದ್ದರು. ಆದರೆ 2024 ರಲ್ಲಿ ಅವರು ರಾಜೀನಾಮೆ ನೀಡಿದರು. ಏತನ್ಮಧ್ಯೆ, ಜೇಸನ್ ಗಿಲ್ಲೆಸ್ಪಿ ಪಾಕಿಸ್ತಾನ ಟೆಸ್ಟ್ ತಂಡದ ಕೋಚಿಂಗ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ, ಆಕಿಬ್ ಜಾವೇದ್ ಅವರನ್ನು ಪಾಕಿಸ್ತಾನದ ಮಧ್ಯಂತರ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರಿಗೆ ಮೊಹಮ್ಮದ್ ಮಸ್ರೂರ್ (ಬ್ಯಾಟಿಂಗ್ ಕೋಚ್), ಅಬ್ದುಲ್ ರೆಹಮಾನ್ (ಸ್ಪಿನ್ ಬೌಲಿಂಗ್ ಕೋಚ್) ಮತ್ತು ಶಾಹಿದ್ ಅಸ್ಲಾಂ (ಸಹಾಯಕ ಕೋಚ್) ಅವರು ತರಬೇತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇದೀಗ ಆಯ್ಕೆದಾರರು ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಗಳನ್ನು ತರಲು ಮುಂದಾದರೆ.. ಇವರೆಲ್ಲರನ್ನೂ ವಜಾಗೊಳಿಸಬಹುದು.
ಈ ಆಟಗಾರರ ತಲೆದಂಡ?
ಪಾಕಿಸ್ತಾನದ ಸೋಲಿನ ನಂತರ ಮಾಜಿ ವೇಗಿ ವಾಸಿಮ್ ಅಕ್ರಮ್ ನಿರಾಶೆ ವ್ಯಕ್ತಪಡಿಸಿದ್ದು, ಆಯ್ಕೆ ಸಮಿತಿಯು ಈಗ ಒಂದು ದೊಡ್ಡ ಹೆಜ್ಜೆ ಇಟ್ಟು ಐದರಿಂದ ಆರು ಬದಲಾವಣೆಗಳನ್ನು ಮಾಡಿ ಅವರ ಬದಲಿಗೆ ನಿರ್ಭೀತ ಕ್ರಿಕೆಟ್ ಆಡುವ ಹೊಸ ಆಟಗಾರರನ್ನು ನೇಮಿಸಬೇಕು ಎಂದು ಹೇಳಿದ್ದರು. ಇದಲ್ಲದೆ, ವಕಾರ್ ಯೂನಸ್, ಶೋಯೆಬ್ ಅಖ್ತರ್ ಸೇರಿದಂತೆ ಅನೇಕ ಪಾಕಿಸ್ತಾನಿ ಮಾಜಿ ಆಟಗಾರರು ತಂಡದಲ್ಲಿ ಬದಲಾವಣೆಯ ಬೇಡಿಕೆಯನ್ನು ಎತ್ತಿದ್ದಾರೆ. ಇದಲ್ಲದೆ ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ನಾಯಕತ್ವವನ್ನು ಕಳೆದುಕೊಳ್ಳಬಹುದು ಮತ್ತು ತಂಡದಿಂದಲೇ ಕೈಬಿಡಲ್ಪಡಬಹುದು ಎನ್ನಲಾಗುತ್ತಿದೆ.
ಇದಲ್ಲದೆ, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬಾಬರ್ ಆಝಂನಂತಹ ಸ್ಟಾರ್ ಬ್ಯಾಟ್ಸ್‌ಮನ್‌ನನ್ನು ಸಹ ತಂಡದಿಂದ ಕೈಬಿಡಬಹುದು. ಫಖರ್ ಜಮಾನ್ ಗಾಯದಿಂದಾಗಿ ಪಾಕಿಸ್ತಾನ ತಂಡಕ್ಕೆ ಸೇರ್ಪಡೆಗೊಂಡಿದ್ದ ಇಮಾಮ್ ಉಲ್ ಹಕ್ ಭಾರತದ ವಿರುದ್ಧ ಆಡುವ ಅವಕಾಶ ಪಡೆದರು ಆದರೆ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಮಾಮ್ ಅವರನ್ನು ಮತ್ತೆ ತಂಡದಿಂದ ಹೊರಹಾಕಬಹುದು.
ತಯ್ಯಬ್ ತಾಹಿರ್ ಮತ್ತು ಶಾಹೀನ್ ಅಫ್ರಿದಿಯಂತಹ ಆಟಗಾರರ ಮೇಲೂ ತೂಗುಗತ್ತಿ ನೇತಾಡಲಾರಂಭಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ಎರಡು ವಿಕೆಟ್‌ಗಳನ್ನು ಪಡೆದರಾದರೂ ಅವರು 8 ಓವರ್‌ಗಳಲ್ಲಿ 74 ರನ್‌ಗಳನ್ನು ನೀಡಿದರು. ಭಾರತ ವಿರುದ್ಧದ ಪಂದ್ಯ ಮಾತ್ರವಲ್ಲ ಅದಕ್ಕೂ ಮುನ್ನ ನಡೆದ ಕೆಲವು ಪಂದ್ಯಗಳಲ್ಲಿ ಅಫ್ರಿದಿ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಬೌಲಿಂಗ್ ಘಟಕದಲ್ಲಿಯೂ ದೊಡ್ಡ ಬದಲಾವಣೆಯನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Tue, 25 February 25
