Champions Trophy 2025: ಲಾಹೋರ್‌ನಲ್ಲಿ ಭಾರತದ ಧ್ವಜ ಹಾರಿಸಿದ ಯುವಕನ ಬಂಧನ; ವಿಡಿಯೋ ನೋಡಿ
Champions Trophy 2025: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿಯಲ್ಲಿ, ಲಾಹೋರ್ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜ ಪ್ರದರ್ಶಿಸಿದ ಯುವಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಕರಾಚಿಯಲ್ಲಿ ಭಾರತದ ಧ್ವಜ ಕಾಣದಿರುವುದಕ್ಕೆ ವಿವಾದ ಉಂಟಾಗಿತ್ತು.

ಬಹಳ ವರ್ಷಗಳ ನಂತರ ಪಾಕಿಸ್ತಾನದ ನೆಲದಲ್ಲಿ ಐಸಿಸಿಯ ಟೂರ್ನಿಯೊಂದು ನಡೆಯುತ್ತಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಭಾರತ ಸರ್ಕಾರ ನಿರ್ಧರಿಸಿತು. ಹೀಗಾಗಿ ಟೀಂ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಉಳಿದಂತೆ 7 ತಂಡಗಳ ಪಂದ್ಯಗಳು ಪಾಕಿಸ್ತಾನದ ಮೂರು ಕ್ರೀಡಾಂಗಣಗಳಾದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯುತ್ತಿವೆ. ಏತನ್ಮಧ್ಯೆ, ಇತ್ತೀಚೆಗೆ ಲಾಹೋರ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ, ಯುವಕನೊಬ್ಬ ಭಾರತದ ಧ್ವಜವನ್ನು ಪ್ರದರ್ಶಿಸಿದಕ್ಕೆ ಆತನನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಅಮಾನುಶವಾಗಿ ನಡೆಸಿಕೊಂಡಿದ್ದು, ಆತನಿಂದ ತ್ರಿವರ್ಣ ಧ್ವಜವನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಆ ಯುವಕನ ಕಾಲರ್ ಹಿಡಿದು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಗಿದ್ದು, ಆ ನಂತರ ಆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯುವಕನ ಬಂಧನ
ಲಾಹೋರ್ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ಯುವಕನೊಬ್ಬ ಭಾರತದ ಧ್ವಜವನ್ನು ಬೀಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯದ್ದೆಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿರುವಂತೆ ಒಬ್ಬ ಯುವಕ ಭಾರತದ ಧ್ವಜವನ್ನು ಬೀಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಆ ಯುವಕನ ಬಳಿಗೆ ಬಂದು, ಅವನ ಕಾಲರ್ ಅನ್ನು ಹಿಡಿದು ಅವನನ್ನು ಆಸನದಿಂದ ಮೇಲೆತ್ತಿದ್ದಾರೆ. ಇದಾದ ನಂತರ, ಅವನ ಬಟ್ಟೆಗಳನ್ನು ಹಿಡಿದು ಎಳೆದು ಕರೆದುಕೊಂಡು ಹೋಗಲಾಗಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆಯೂ ವಿವಾದ
ಈ ಹಿಂದೆ, ಕರಾಚಿ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಅಳವಡಿಸಲಾಗಿತ್ತು. ಆದರೆ ಭಾರತದ ಧ್ವಜ ಕಾಣಿಸದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಈ ವಿಷಯವನ್ನು ಸ್ಪಷ್ಟಪಡಿಸುವ ಸಂದರ್ಭದಲ್ಲಿ ಮೂಲವೊಂದು, ಭಾರತ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬಂದಿಲ್ಲ, ಆದ್ದರಿಂದ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿಲ್ಲ ಎಂದು ಹೇಳಿತ್ತು. ಆದಾಗ್ಯೂ, ಈ ಬಗ್ಗೆ ವಿವಾದ ಎದ್ದ ಬಳಿಕ ಪಾಕಿಸ್ತಾನದ ಕ್ರೀಡಾಂಗಣದಲ್ಲಿ ಇತರ ದೇಶಗಳ ಧ್ವಜಗಳೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನು ಸಹ ಹಾರಿಸಲಾಯಿತು.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಪಾಕಿಸ್ತಾನ
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ, ಈ ನಾಲ್ಕು ತಂಡಗಳು ಗ್ರೂಪ್ ಎ ನಲ್ಲಿವೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ತಲಾ ಒಂದು ಪಂದ್ಯದಲ್ಲಿ ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಸತತ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿವೆ. ಇದೀಗ ಉಭಯ ತಂಡಗಳು ಫೆಬ್ರವರಿ 27 ರಂದು ತಮ್ಮ ಕೊನೆಯ ಔಪಚಾರಿಕ ಪಂದ್ಯವನ್ನು ಆಡಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Tue, 25 February 25
