Champions Trophy 2025: ಬಾಂಗ್ಲಾ ವಿರುದ್ಧವೂ ಸೋತರೆ ಪಾಕ್ ತಂಡಕ್ಕಾಗುವ ನಷ್ಟ ಎಷ್ಟು ಕೋಟಿ ಗೊತ್ತಾ?
Champions Trophy 2025: ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿಯೇ ಹೊರಬಿದ್ದಿದೆ. ಇದೀಗ ಫೆಬ್ರವರಿ 27 ರಂದು ಬಾಂಗ್ಲಾದೇಶ ವಿರುದ್ಧ ಔಪಚಾರಿಕ ಪಂದ್ಯವನ್ನು ಆಡಲು ಪಾಕ್ ತಂಡ ಸಜ್ಜಾಗಿದೆ. ಈ ಪಂದ್ಯದ ಫಲಿತಾಂಶದಿಂದ ಅದರ ಅಂತಿಮ ಸ್ಥಾನ ಮತ್ತು ಐಸಿಸಿಯಿಂದ ಪಡೆಯುವ ಬಹುಮಾನದ ಮೊತ್ತ (3.04 ಕೋಟಿ ಅಥವಾ 1.22 ಕೋಟಿ ರೂ.) ನಿರ್ಧಾರವಾಗುತ್ತದೆ. ಪ್ರತಿಷ್ಠೆಯ ಜೊತೆಗೆ ಕೋಟಿಗಟ್ಟಲೆ ಹಣದ ನಷ್ಟವನ್ನು ತಪ್ಪಿಸಲು ಪಾಕಿಸ್ತಾನ ಗೆಲ್ಲುವುದು ಅತ್ಯಗತ್ಯ.

ಆತಿಥೇಯ ತಂಡವಿಲ್ಲದೆ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನಾಡಲು ಉಳಿದ ತಂಡಗಳು ಎದುರು ನೋಡುತ್ತಿವೆ. ಬಹಳ ವರ್ಷಗಳ ನಂತರ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ನೀಡುತ್ತಿರುವ ಪಾಕಿಸ್ತಾನ, ಲೀಗ್ ಹಂತದಲ್ಲಿಯೇ ತನ್ನ ಪ್ರಯಾಣ ಮುಗಿಸಿದೆ. ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ಕೂಡ ತನ್ನ ಪ್ರಯಾಣವನ್ನು ಲೀಗ್ ಹಂತದಲ್ಲೇ ಕೊನೆಗೊಳಿಸಿದೆ. ಗುಂಪು ಹಂತದಲ್ಲಿ ಎರಡೂ ತಂಡಗಳು ಮೂರು ಪಂದ್ಯಗಳಲ್ಲಿ ಎರಡನ್ನು ಆಡಿದ್ದು, ಈಗ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಫಲಿತಾಂಶ ಪಾಕಿಸ್ತಾನಕ್ಕೆ ಪ್ರತಿಷ್ಠೆಯ ವಿಷಯವಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿ ನಷ್ಟಕ್ಕೂ ಕಾರಣವಾಗಬಹುದು.
ಪಾಕಿಸ್ತಾನ-ಬಾಂಗ್ಲಾದೇಶ ಮುಖಾಮುಖಿ
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ 27 ರಂದು ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತಿವೆ. ಹೀಗಾಗಿ ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿವೆ. ಆದರೆ ಈಗ ಪ್ರಶ್ನೆ ಏನೆಂದರೆ, ಎಂಟು ತಂಡಗಳ ಈ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಎಷ್ಟು ಸ್ಥಾನ ಗಳಿಸುತ್ತದೆ ಮತ್ತು ಕೊನೆಯ ಪಂದ್ಯವನ್ನು ಗೆದ್ದರೆ ಅದಕ್ಕಾಗುವ ಪ್ರಯೋಜನವೇನು ಅಥವಾ ಕೊನೆಯ ಪಂದ್ಯವನ್ನು ಸೋತರೆ ಅದಕ್ಕಾಗುವ ನಷ್ಟವೇನು ಎಂಬುದು.
ಪಾಕಿಸ್ತಾನಕ್ಕೆ ಕೋಟಿಗಟ್ಟಲೆ ನಷ್ಟ
ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ ನಿಗದಿ ಮಾಡಿರುವ ಬಹುಮಾನ ಮೊತ್ತದ ಪ್ರಕಾರ, ಈ ಟೂರ್ನಿ ಗೆಲ್ಲುವ ಚಾಂಪಿಯನ್ ತಂಡಕ್ಕೆ 19.46 ಕೋಟಿ ರೂ. ಬಹುಮಾನ ಸಿಗಲಿದೆ. ಹಾಗೆಯೇ ರನ್ನರ್ ಅಪ್ ತಂಡಕ್ಕೆ 9.73 ಕೋಟಿ ರೂ. ಬಹುಮಾನ ಸಿಗಲಿದೆ. ಸೆಮಿಫೈನಲಿಸ್ಟ್ ತಂಡಕ್ಕೆ 4.86 ಕೋಟಿ ರೂ. ಸಿಕ್ಕರೆ, ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3.04 ಕೋಟಿ ರೂ. ಮತ್ತು ಏಳು ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 1.22 ಕೋಟಿ ರೂ. ಬಹುಮಾನ ನೀಡಲಾಗುವುದು.
ಇದೀಗ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿರುವುದರಿಂದ ಸ್ವಾಭಾವಿಕವಾಗಿಯೇ ಅದು ನಾಲ್ಕನೇ ಸ್ಥಾನಕ್ಕಿಂತ ಕೆಳಗಿರುತ್ತದೆ. ಇದೀಗ ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ಐದನೇ ಅಥವಾ ಆರನೇ ಸ್ಥಾನವನ್ನು ಪಡೆದುಕೊಳ್ಳಬಹುದು. ಈ ಪರಿಸ್ಥಿತಿಯಲ್ಲಿ ಪಾಕ್ ತಂಡಕ್ಕೆ ಐಸಿಸಿಯಿಂದ ಬಹುಮಾನದ ರೂಪದಲ್ಲಿ 3.04 ಕೋಟಿ ರೂ. ಸಿಗಲಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಬಾಂಗ್ಲಾದೇಶ, ಪಾಕಿಸ್ತಾನವನ್ನು ಸೋಲಿಸಿದರೆ ಪಾಕ್ ತಂಡ ಏಳು ಅಥವಾ ಎಂಟನೇ ಸ್ಥಾನಕ್ಕೆ ಜಾರಲಿದೆ. ಇದು ನಿಜವಾದರೆ ಪಾಕಿಸ್ತಾನದ ಖಾತೆಗೆ ಕೇವಲ 1.22 ಕೋಟಿ ರೂ. ಮಾತ್ರ ಹಣ ಸಿಗಲಿದೆ.
ಬಾಂಗ್ಲಾ ವಿರುದ್ಧ ಪಾಕ್ ಸೋತರೆ…
ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಸೋತ ನಂತರ ಪಾಕಿಸ್ತಾನ ತಂಡ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಪಾಕಿಸ್ತಾನ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ತವರಿನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಿಂದ ಲೀಗ್ ಹಂತದಲ್ಲೇ ಹೊರಬಿದ್ದ ನಂತರ ತಂಡ ಇನ್ನಿಲ್ಲದ ಅವಮಾನವನ್ನು ಎದುರಿಸುತ್ತಿದೆ. ಈಗ ಬಾಂಗ್ಲಾದೇಶದ ವಿರುದ್ಧವೂ ಪಂದ್ಯವನ್ನು ಸೋತರೆ, ಪಾಕ್ ತಂಡವನ್ನು ಆ ದೇವರೇ ಕಾಪಾಡಬೇಕು. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ತಂಡದ ಮೇಲೆ ಕೋಟ್ಯಂತರ ರೂಪಾಯಿ ನಷ್ಟವನ್ನು ತಪ್ಪಿಸುವ ಜವಾಬ್ದಾರಿ ಮಾತ್ರವಲ್ಲದೆ, ಈ ಪಂದ್ಯವು ರಿಜ್ವಾನ್ ಪಡೆಗೆ ಪ್ರತಿಷ್ಠೆಯ ವಿಷಯವೂ ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Tue, 25 February 25
