ಸಚಿನ್- ಗುರುಕೀರತ್ ಸ್ಫೋಟಕ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಗೆದ್ದ ಇಂಡಿಯಾ ಮಾಸ್ಟರ್ಸ್
International Masters League 2025: ಇಂಡಿಯಾ ಮಾಸ್ಟರ್ಸ್ ತಂಡವು ನವಿ ಮುಂಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025ರಲ್ಲಿ ಇಂಗ್ಲೆಂಡ್ ಮಾಸ್ಟರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಸಚಿನ್ ತೆಂಡೂಲ್ಕರ್ ಮತ್ತು ಗುರುಕೀರತ್ ಮಾನ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಕೇವಲ 132 ರನ್ ಗಳಿಸಿತು. ಈ ಗೆಲುವಿನೊಂದಿಗೆ ಭಾರತ ಮಾಸ್ಟರ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ನವಿ ಮುಂಬೈನಲ್ಲಿರುವ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ರ ಮೂರನೇ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಇಂಗ್ಲೆಂಡ್ ಮಾಸ್ಟರ್ಸ್ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡ, ಇಂಗ್ಲೆಂಡ್ ಮಾಸ್ಟರ್ಸ್ ತಂಡವನ್ನು ಬರೋಬ್ಬರಿ 9 ವಿಕೆಟ್‌ಗಳಿಂದ ಮಣಿಸಿದೆ. ಇಂಡಿಯಾ ಮಾಸ್ಟರ್ಸ್ ಪರ ತಂಡದ ನಾಯಕ ಸಚಿನ್ ತೆಂಡೂಲ್ಕರ್, ಮತ್ತೊಬ್ಬ ಆರಂಭಿಕ ಗುರುಕೀರತ್ ಸಿಂಗ್ ಮಾನ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಂಡಿಯಾ ಮಾಸ್ಟರ್ಸ್ ತಂಡವು ಈ ಹಿಂದೆ ನಡೆದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು ಸೋಲಿಸಿತ್ತು.
132 ರನ್ ಕಲೆಹಾಕಿದ ಇಂಗ್ಲೆಂಡ್ ಮಾಸ್ಟರ್ಸ್
ಈ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್‌ಗಳನಷ್ಟೇ ಕಲೆಹಾಕಲು ಶಕ್ತವಾಯಿತು. ತಂಡದ ಪರ ಡ್ಯಾರೆನ್ ಮ್ಯಾಡಿ ಅತಿ ಹೆಚ್ಚು 25 ರನ್ ಗಳಿಸಿದರೆ, ಟಿಮ್ ಆಂಬ್ರೋಸ್ 23 ರನ್‌ಗಳ ಕೊಡುಗೆ ನೀಡಿದರು. ಕ್ರಿಸ್ ಸ್ಕೋಫೀಲ್ಡ್ ಕೂಡ 18 ರನ್‌ಗಳ ಕಾಣಿಕೆ ನೀಡಿದರು. ಮತ್ತೊಂದೆಡೆ, ಇಂಡಿಯಾ ಮಾಸ್ಟರ್ಸ್ ಪರ ಬೌಲಿಂಗ್ನಲ್ಲಿ ಮಿಂಚಿದ ಧವಲ್ ಕುಲಕರ್ಣಿ ಗರಿಷ್ಠ 3 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ ಮತ್ತು ಪವನ್ ನೇಗಿ ಕೂಡ ತಲಾ 2 ವಿಕೆಟ್ ಪಡೆದರು. ಇವರಲ್ಲದೆ, ವಿನಯ್ ಕುಮಾರ್ಗೆ 1 ವಿಕೆಟ್ ಸಿಕ್ಕಿತು.
ಸಚಿನ್- ಗುರುಕೀರತ್ ಜೊತೆಯಾಟ
133 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಗುರುಕೀರತ್ ಮಾನ್ ಉತ್ತಮ ಆರಂಭ ನೀಡಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 43 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ 21 ಎಸೆತಗಳಲ್ಲಿ 161.90 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 34 ರನ್ ಬಾರಿಸಿದರು. ಮತ್ತೊಂದೆಡೆ, ಗುರುಕೀರತ್ ಸಿಂಗ್ ಮಾನ್ 35 ಎಸೆತಗಳಲ್ಲಿ 180 ಸ್ಟ್ರೈಕ್ ರೇಟ್‌ನಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 63 ರನ್ ಕಲೆಹಾಕಿದರು. ಇವರಿಬ್ಬರಲ್ಲದೆ, ಯುವರಾಜ್ ಸಿಂಗ್ ಕೂಡ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 27 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ರಲ್ಲಿ ಒಟ್ಟು 6 ತಂಡಗಳು ಆಡುತ್ತಿವೆ. ಇಂಡಿಯಾ ಮಾಸ್ಟರ್ಸ್ ಪ್ರಸ್ತುತ ಆಡಿರುವ 2 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳನ್ನು ಹೊರತುಪಡಿಸಿ, ಬೇರೆ ಯಾವುದೇ ತಂಡದ ಗೆಲುವಿನ ಖಾತೆ ಪ್ರಸ್ತುತ ತೆರೆದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 pm, Tue, 25 February 25