ಬಾಬರ್ ಆಝಂ ಝಿಂಬಾಬ್ವೆ ವಿರುದ್ಧದ ಕಿಂಗ್: ಪಾಕ್ ಕ್ರಿಕೆಟಿಗನ ವ್ಯಂಗ್ಯ
Babar Azam: ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಬಾಬರ್ ಆಝಂ ಅರ್ಧಶತಕ ಬಾರಿಸಿದ್ದರು. ಆದರೆ ಈ ಅರ್ಧಶತಕ ಪೂರೈಸಲು ಅವರು ತೆಗೆದುಕೊಂಡಿದ್ದು ಬರೋಬ್ಬರಿ 81 ಎಸೆತಗಳನ್ನು ಎಂಬುದು ವಿಶೇಷ. ಅತ್ತ 321 ರನ್ಗಳ ಗುರಿ ಹೊಂದಿದ್ದರೂ ಬಾಬರ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ಇನ್ನು ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 23 ರನ್ ಬಾರಿಸಿ ಔಟಾಗಿದ್ದರು.

ಟೀಮ್ ಇಂಡಿಯಾ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಆಟಗಾರರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಪಾಕ್ ಪಡೆಯ ಬ್ಯಾಟಿಂಗ್ ಬೆನ್ನೆಲುಬು ಎಂದೇ ಬಿಂಬಿಸಿಕೊಂಡಿರುವ ಬಾಬರ್ ಆಝಂ ವಿರುದ್ಧ ಹಲವು ಮಾಜಿ ಆಟಗಾರರು ಅಕ್ರೋಶ ಹೊರಹಾಕಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ.
ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, ಬಾಬರ್ ಆಝಂ ನ್ಯೂಝಿಲೆಂಡ್ ವಿರುದ್ಧ ವಿಫಲರಾಗಿದ್ದರು. ಅದು ಸಹ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ. ಇದೀಗ ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಅಂದರೆ ಆತ ಕೇವಲ ದುರ್ಬಲ ತಂಡಗಳ ವಿರುದ್ಧ ಮಾತ್ರ ರನ್ಗಳಿಸುತ್ತಾರೆ ಎಂಬುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.
ಬಾಬರ್ ಆಝಂ ಇಷ್ಟು ದಿನ ರನ್ ಗಳಿಸಿಲ್ಲ. ಆತನ ರನ್ ಗಳಿಸುವುದೇ ಝಿಂಬಾಬ್ವೆಯಂತಹ ಸಣ್ಣ ಪುಟ್ಟ ತಂಡಗಳ ವಿರುದ್ಧ ಮಾತ್ರ. ಬಲಿಷ್ಠ ಟೀಮ್ಗಳ ವಿರುದ್ಧ ಆತನಿಗೆ ರನ್ ಗಳಿಸಬೇಕೆಂಬ ಉದ್ದೇಶವೇ ಇಲ್ಲ. ನನ್ನ ಪ್ರಕಾರ ಬಾಬರ್ ಆಝಂ ಝಿಂಬಾಬ್ವೆ ವಿರುದ್ಧದ ಕಿಂಗ್ ಎಂದು ಡ್ಯಾನಿಶ್ ಕನೇರಿಯಾ ವ್ಯಂಗ್ಯವಾಡಿದ್ದಾರೆ.
ಬಾಬರ್ ಆಝಂ ಅವರನ್ನು ಪಾಕಿಸ್ತಾನ್ ಮಾಧ್ಯಮಗಳು ಕಿಂಗ್ ಎಂದು ಬಿಂಬಿಸುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಐಸಿಸಿಯಂತಹ ಮಹತ್ವದ ಟೂರ್ನಿಗಳಲ್ಲಿ ಬಾಬರ್ ಆಝಂ ಕಡೆಯಿಂದ ಉತ್ತಮ ಇನಿಂಗ್ಸ್ ಮೂಡಿ ಬರುತ್ತಿಲ್ಲ. ಹೀಗಾಗಿಯೇ ಇದೀಗ ಅಸಲಿ ಕಿಂಗ್ ಯಾರೆಂಬುದು ಬಹಿರಂಗವಾಗಿದೆ ಎಂಬ ಮಾತುಗಳು ಪಾಕಿಸ್ತಾನದಲ್ಲೇ ಕೇಳಿ ಬರುತ್ತಿದೆ.
ಇತ್ತ ಮಾಧ್ಯಮಗಳ ಹೈಪ್ನೊಂದಿಗೆ ಕಿಂಗ್ ಎಂದು ಕರೆಸಿಕೊಂಡಿದ್ದ ಬಾಬರ್ ಆಝಂ ಝಿಂಬಾಬ್ವೆ ವಿರುದ್ಧದ ಮಾತ್ರ ರನ್ಗಳಿಸುತ್ತಾರೆ. ಬಲಿಷ್ಠ ತಂಡಗಳ ವಿರುದ್ಧದ ರನ್ಗಳಿಸಲು ಪರದಾಡುತ್ತಾನೆ. ಅದೇಗೆ ಆತನನ್ನು ಕಿಂಗ್ ಎಂದು ವರ್ಣಿಸಲಾಗುತ್ತಿದೆ ಎಂದು ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.
ಬಾಬರ್ ಆಝಂ ಫಾರ್ಮ್ನಲ್ಲಿ ಇಲ್ಲ ಎಂಬುದೇ ಸತ್ಯ. ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರನ್ನು ಕೈ ಬಿಡಲಾಗಿತ್ತು. ಇದೀಗ ಏಕದಿನ ಪಂದ್ಯಗಳಲ್ಲೂ ಅವರು ಲಯದಲ್ಲಿ ಇಲ್ಲ ಎಂಬುದು ಬಹಿರಂಗವಾಗಿದೆ ಎಂದು ಕನೇರಿಯಾ ಹೇಳಿದ್ದಾರೆ.
ಇನ್ನು ಪಾಕಿಸ್ತಾನ್ ತಂಡದ ಬ್ಯಾಟಿಂಗ್ ಲೈನಪ್ ಬಗ್ಗೆ ಮಾತನಾಡಿರುವ ಡ್ಯಾನಿಶ್ ಕನೇರಿಯಾ, ಪಾಕ್ ಉತ್ತಮ ಬ್ಯಾಟರ್ಗಳನ್ನು ಹೊಂದಿಲ್ಲ. ಅದರಲ್ಲೂ ಕೆಳ ಕ್ರಮಾಂಕದವರೆಗೆ ಉತ್ತಮ ಬ್ಯಾಟ್ಸ್ಮನ್ಗಳೇ ಇಲ್ಲ. ಸಲ್ಮಾನ್ ಆಘಾ ಮತ್ತು ಖುಷ್ದಿಲ್ ಶಾ ಆಗೊಮ್ಮೆ ಈಗೊಮ್ಮೆ ಕೊಡುಗೆಗಳನ್ನು ನೀಡುತ್ತಾರೆ. ಸೌದ್ ಶಕೀಲ್ ತಾಂತ್ರಿಕವಾಗಿ ಸರಿಯಾದ ಬ್ಯಾಟರ್. ಆದರೆ ರಿಝ್ವಾನ್ ಅವರ ಬ್ಯಾಟ್ ಕೆಲಸ ಮಾಡುವುದನ್ನು ನಿಲ್ಲಿಸಿದಂತೆ ತೋರುತ್ತದೆ ಎಂದರು.
ನನಗೆ ಈ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಬೇಗನೆ ಹೊರಬೀಳುತ್ತದೆ ಎಂಬುದು ಮೊದಲೇ ಗೊತ್ತಿತ್ತು. ತಂಡದ ಘೋಷಣೆಯ ವೇಳೆಯೇ ಪಾಕಿಸ್ತಾನ್ ತಂಡದ ಸಾಮರ್ಥ್ಯ ಬಹಿರಂಗವಾಗಿತ್ತು. ಹೀಗಾಗಿ ಮೊದಲ ಸುತ್ತಿನಲ್ಲೇ ಪಾಕ್ ಪಡೆ ಹೊರಬಿದ್ದಿರುವುದರಿಂದ ನನಗೆ ಆಶ್ಚರ್ಯವಾಗಿಲ್ಲ ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
ಇದನ್ನೂ ಓದಿ: ರಚಿನ್ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆಯೇ ಉಡೀಸ್
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಹೊಂದಿರುವ ಪಾಕಿಸ್ತಾನ್ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತರೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿದೆ. ಈ ಎರಡು ಸೋಲುಗಳಿಂದ ಇದೀಗ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದಿದೆ.