Champions Trophy 2025: 16 ಗಂಟೆಗಳ ಆಟಕ್ಕೆ 1800 ಕೋಟಿ ಖರ್ಚು ಮಾಡಿದ ಪಾಕಿಸ್ತಾನ
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿದ ಪಾಕಿಸ್ತಾನ ತಂಡ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದೆ. 1800 ಕೋಟಿ ರೂಪಾಯಿ ಖರ್ಚು ಮಾಡಿದರೂ, ತಂಡದ ಸಿದ್ಧತೆ ಮತ್ತು ಆಟ ಕಳಪೆಯಾಗಿತ್ತು. ಬಾಂಗ್ಲಾದೇಶದೊಂದಿಗಿನ ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಪಾಕಿಸ್ತಾನ ಕೇವಲ 16 ಗಂಟೆಗಳ ಕಾಲ ಮಾತ್ರ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಿ ಟೂರ್ನಿಯಿಂದ ಹೊರಬಿದ್ದಿದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೊಡ್ಡ ಮುಜುಗರವಾಗಿದೆ.

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಆಯೋಜಕತ್ವದ ಜವಬ್ದಾರಿ ಹೊತ್ತುಕೊಂಡಿದ್ದ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಹೋಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ಆದರೆ ಸಿದ್ಧತೆಗಳು ಸರಿಯಾಗಿಲ್ಲದಿದ್ದಾಗ, ಆಯ್ಕೆ ಸರಿಯಾಗಿಲ್ಲದಿದ್ದಾಗ ಮತ್ತು ತಂಡದಲ್ಲಿ ಸಾಮರಸ್ಯ ಇಲ್ಲದಿದ್ದಾಗ, ಇದೆಲ್ಲವೂ ಸಂಭವಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಸುಮಾರು 29 ವರ್ಷಗಳ ನಂತರ ಐಸಿಸಿ (ICC) ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ತಂಡವು ಸೆಮಿಫೈನಲ್ ತಲುಪಲು ಸಾಧ್ಯವಾಗದ ಕಾರಣ ತನ್ನದೇ ತವರಿನಲ್ಲಿ ಮುಜುಗರವನ್ನು ಎದುರಿಸಬೇಕಾಯಿತು. ಇದರ ಜೊತೆಗೆ ಟೂರ್ನಿ ಆಯೋಜಿಸಲು 1800 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಪಾಕಿಸ್ತಾನಕ್ಕೆ ತನ್ನ ತಂಡದ ಆಟವನ್ನು ಕೇವಲ 16 ಗಂಟೆಗಳ ಕಾಲ ಮಾತ್ರ ಕಣ್ತುಂಬಿಕೊಳ್ಳಲು ಸಾಧ್ಯವಾಗಿತು.
ಫೆಬ್ರವರಿ 27 ಗುರುವಾರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಗ್ರೂಪ್ ಹಂತದ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಯಿತು. ಈ ಟೂರ್ನಿಯಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯ ಇದಾಗಿದ್ದು, ಎರಡೂ ತಂಡಗಳು ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದವು. ಪಂದ್ಯ ರದ್ದಾದರಿಂದ ಎರಡೂ ತಂಡಗಳು ತಲಾ ಒಂದು ಅಂಕ ಮಾತ್ರ ಪಡೆದು ಟೂರ್ನಿಯಿಂದ ಹೊರಬಿದ್ದವು.
ಚಾಂಪಿಯನ್ಸ್ ಟ್ರೋಫಿಗೆ 1800 ಕೋಟಿ ಖರ್ಚು
ಟೂರ್ನಿಯ ಆರಂಭದಲ್ಲೇ ಪಂದ್ಯಾವಳಿಯಿಂದ ಹೊರಬಿದ್ದ ಬಾಂಗ್ಲಾದೇಶಕ್ಕೆ ಕಳೆದುಕೊಳ್ಳುವುದು ಏನು ಇಲ್ಲ. ಆದರೆ ಈ ಪಂದ್ಯಾವಳಿಯ ಆತಿಥ್ಯವಹಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಲೀಗ್ ಹಂತದಲ್ಲೇ ಗೇಟ್ಪಾಸ್ ಸಿಕ್ಕಿದ್ದು, ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. 1996 ರ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಪಾಕಿಸ್ತಾನದಲ್ಲಿ ನಡೆಯುತ್ತಿದ್ದರಿಂದ ಈ ಟೂರ್ನಮೆಂಟ್ ಪಾಕಿಸ್ತಾನಕ್ಕೂ ವಿಶೇಷವಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ವರದಿಗಳ ಪ್ರಕಾರ, ಪಾಕಿಸ್ತಾನ ಮಂಡಳಿಯು ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಪಂದ್ಯಾವಳಿಯ ಸ್ಥಳಗಳ ಕ್ರೀಡಾಂಗಣಗಳನ್ನು ನವೀಕರಿಸಲು 1800 ಕೋಟಿ ಪಾಕಿಸ್ತಾನಿ ರೂಪಾಯಿಗಳು ಅಂದರೆ ಸುಮಾರು 560.93 ಕೋಟಿ ಭಾರತೀಯ ರೂಪಾಯಿಗಳನ್ನು ಖರ್ಚು ಮಾಡಿದೆ.
ಇದನ್ನೂ ಓದಿ: IND vs PAK: ಕೆಲವೇ ತಿಂಗಳಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆಯಲ್ಲಿವೆ 3 ಪಂದ್ಯಗಳು
16 ಗಂಟೆಗಳ ಕಾಲ ನಡೆದ ಪಾಕ್ ಆಟ
ಪಾಕಿಸ್ತಾನದ ಈ ಐತಿಹಾಸಿಕ ಕ್ರೀಡಾಂಗಣಗಳು ಇಷ್ಟೊಂದು ದೊಡ್ಡ ಖರ್ಚು ಮಾಡಿದ ನಂತರ ತುಂಬಾ ಬೆರಗುಗೊಳಿಸುವಂತಿದ್ದವು. ಆದರೆ ಪಾಕಿಸ್ತಾನ ತಂಡದ ಪ್ರದರ್ಶನ ಮಾತ್ರ ತುಂಬಾ ಕಳಪೆಯಾಗಿತ್ತು. ತಂಡವು ಕೇವಲ 16 ಗಂಟೆಗಳ ಕಾಲ ಮಾತ್ರ ಮೈದಾನದಲ್ಲಿ ಕಾಲ ಕಳೆಯಲಷ್ಟೇ ಶಕ್ತವಾಯಿತು. ಸುಮಾರು 8 ಗಂಟೆಗಳ ಕಾಲ ನಡೆದಿದ್ದ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ, ತನ್ನ ಮುಂದಿನ ಪಂದ್ಯವನ್ನು ಟೀಂ ಇಂಡಿಯಾ ವಿರುದ್ಧ ಕೇವಲ 8 ಗಂಟೆಗಳಲ್ಲಿ ಸೋತಿತ್ತು. ಅಂದರೆ ಪಿಸಿಬಿ, ಕ್ರೀಡಾಂಗಣಗಳನ್ನು ಸುಧಾರಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿತ್ತಾದರೂ, ತನ್ನ ತಂಡವನ್ನು ಸುಧಾರಿಸಲು ಅಗತ್ಯವಾದ ಕಠಿಣ ಮತ್ತು ನಿಖರವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಮಂಡಳಿ ದೇಶದ ಜನರೆದರು ತಲೆಬಾಗಬೇಕಾಗಿ ಬಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Thu, 27 February 25



