AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: ಮುಂಬೈ ವಿರುದ್ಧ ಗೆಲುವು ಸಾಧಿಸಿ ಬಿಸಿಸಿಐ ಬಳಿ ದೂರು ನೀಡಿದ ಜಮ್ಮು ಕಾಶ್ಮೀರ

Ranji Trophy: ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು ರೋಹಿತ್ ಶರ್ಮಾ ನೇತೃತ್ವದ ಪ್ರಬಲ ಮುಂಬೈ ತಂಡವನ್ನು ಸೋಲಿಸಿ ಅಚ್ಚರಿ ಮೂಡಿಸಿದೆ. ಆದರೆ, ಪಂದ್ಯದಲ್ಲಿನ ಕೆಲವು ಅಂಪೈರಿಂಗ್ ನಿರ್ಧಾರಗಳಿಂದ ಅಸಮಾಧಾನಗೊಂಡ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ, ಕಳಪೆ ಅಂಪೈರಿಂಗ್ ಬಗ್ಗೆ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಿದೆ. ಶ್ರೇಯಸ್ ಅಯ್ಯರ್ ಅವರ ನಾಟೌಟ್ ತೀರ್ಪು ಮತ್ತು ಅಬಿದ್ ಮುಷ್ತಾಕ್ ಅವರ ಎಲ್‌ಬಿಡಬ್ಲ್ಯೂ ಔಟ್‌ ವಿವಾದಾತ್ಮಕವಾಗಿತ್ತು.

Ranji Trophy: ಮುಂಬೈ ವಿರುದ್ಧ ಗೆಲುವು ಸಾಧಿಸಿ ಬಿಸಿಸಿಐ ಬಳಿ ದೂರು ನೀಡಿದ ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರ ತಂಡ
ಪೃಥ್ವಿಶಂಕರ
|

Updated on:Jan 26, 2025 | 6:42 PM

Share

ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆಯಂತಹ ಸ್ಟಾರ್‌ಗಳಿಂದ ಅಲಂಕರಿಸಲ್ಪಟ್ಟ ಮುಂಬೈ ತಂಡವನ್ನು ಸೋಲಿಸಿದ ಅಮೋಘ ಸಾಧನೆ ಮಾಡಿದೆ. ಸ್ಟಾರ್ ಆಟಗಾರರಿಂದ ಕಂಗೊಳಿಸುತ್ತಿದ್ದ ತಂಡವನ್ನು ಸೋಲಿಸಿದ ನಂತರವೂ ತೃಪ್ತರಾಗದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯು ಪಂದ್ಯ ಮುಗಿದ ನಂತರ, ಕಳಪೆ ಅಂಪೈರಿಂಗ್ ಬಗ್ಗೆ ಬಿಸಿಸಿಐಗೆ ದೂರು ನೀಡಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಅಂಪೈರ್ ನೀಡಿದ ಕೆಲವು ನಿರ್ಧಾರಗಳು ಜಮ್ಮು ಮತ್ತು ಕಾಶ್ಮೀರ ತಂಡದ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಚಾರ ಇದೀಗ ಬಿಸಿಸಿಐ ಮುಂದೆ ಪ್ರಸ್ತಾಪವಾಗಿದೆ.

ಕೆಟ್ಟ ಅಂಪೈರಿಂಗ್ ಬಗ್ಗೆ ಬಿಸಿಸಿಐಗೆ ದೂರು

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ (ಜೆಕೆಸಿಎ) ಆಡಳಿತಾಧಿಕಾರಿ ಅನಿಲ್ ಗುಪ್ತಾ ಈ ವಿಷಯದ ಕುರಿತು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ್ದು, ಕಳಪೆ ಅಂಪೈರಿಂಗ್ ಬಗ್ಗೆ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ‘ಪಂದ್ಯದಲ್ಲಿ ಅಂಪೈರಿಂಗ್ ಕುರಿತು ನಾವು ಬಿಸಿಸಿಐಗೆ ಅಧಿಕೃತ ದೂರು ನೀಡಿದ್ದೇವೆ. ಅಂಪೈರ್ ನೀಡಿದ ಕೆಲವು ನಿರ್ಧಾರಗಳನ್ನು ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನಮ್ಮ ತಂಡದ ಆಟಗಾರ ಅಬಿದ್ ಮುಷ್ತಾಕ್ ಅವರನ್ನು ಚೆಂಡು ಲೆಗ್-ಸ್ಟಂಪ್‌ನಿಂದ ಹೊರಗೆ ಇದ್ದರೂ ಅಂಪೈರ್ ಅವರನ್ನು ಎಲ್‌ಬಿಡಬ್ಲ್ಯೂ ಔಟೆಂದು ತೀರ್ಪು ನೀಡಿದರು. ತದನಂತರ ಶ್ರೇಯಸ್ ಅಯ್ಯರ್, ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿರುವುದು ಸ್ಪಷ್ಟವಾಗಿದ್ದರೂ ಅಂಪೈರ್ ಅವರನ್ನು ನಾಟೌಟ್ ಎಂದು ಘೋಷಿಸಿದರು. ನಾನು ಮೈದಾನದಲ್ಲಿ ಉಪಸ್ಥಿತರಿದ್ದು ಪಂದ್ಯವನ್ನು ವೀಕ್ಷಿಸುತ್ತಿದ್ದೆ, ಹಾಗಾಗಿ ಕೆಲವು ಅಂಪೈರಿಂಗ್ ನಿರ್ಧಾರಗಳಿಂದ ನಾನು ನಿರಾಶೆಗೊಂಡಿದ್ದೇನೆ ಎಂದಿದ್ದಾರೆ.

ಅಯ್ಯರ್ ನಾಟೌಟ್ ತೀರ್ಪಿನ ಬಗ್ಗೆ ಅಸಮಾಧಾನ

ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಆಟಗಾರ ಅಬಿದ್ ಮುಷ್ತಾಕ್ ಅವರ ಎಲ್‌ಬಿಡಬ್ಲ್ಯೂ ಔಟನ್ನು ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಅವರ ನಾಟೌಟ್ ತೀರ್ಪಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಎರಡನೇ ಇನ್ನಿಂಗ್ಸ್‌ನಲ್ಲಿ, ಶ್ರೇಯಸ್ ಅಯ್ಯರ್ ಎಂಟು ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್‌ಕೀಪರ್‌ಗೆ ಹೋಯಿತು. ಚೆಂಡು ಬ್ಯಾಟ್​ನ ಅಂಚಿಗೆ ಹೊಡೆಯುವ ಸದ್ದು ಕೂಡ ಸ್ಪಷ್ಟವಾಗಿ ಕೇಳಿಸಿತು. ಜಮ್ಮು ಮತ್ತು ಕಾಶ್ಮೀರದ ಆಟಗಾರರು ಕೂಡ ಅಯ್ಯರ್ ಅವರ ವಿಕೆಟ್ ಅನ್ನು ಆಚರಿಸಲು ಪ್ರಾರಂಭಿಸಿದರು. ಆದರೆ ಅಂಪೈರ್ ಮಾತ್ರ ಶ್ರೇಯಸ್ ನಾಟೌಟ್ ಎಂದು ತೀರ್ಪು ನೀಡಿದರು.

ಅಂಪೈರ್ ಜೊತೆ ಅಯ್ಯರ್ ವಾಗ್ವಾದ

ಇದಾದ ಬಳಿಕ ಶ್ರೇಯಸ್ 17 ರನ್ ಗಳಿಸಿದ್ದಾಗಲೂ ಸ್ಟಂಪ್‌ನ ಹಿಂದೆ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತರು. ಈ ವೇಳೆ ಅಂಪೈರ್, ಅಯ್ಯರ್ ಔಟೆಂದು ತೀರ್ಪು ನೀಡಿದರು. ಆದರೆ ಈ ನಿರ್ಧಾರದಿಂದ ಅಸಮಾಧಾನಗೊಂಡ ಅಯ್ಯರ್, ಅಂಪೈರ್ ಜೊತೆ ಬಹಳ ಹೊತ್ತು ವಾಗ್ವಾದ ನಡೆಸಿದರು. ಆದರೆ ಅಂತಿಮವಾಗಿ ಅವರು ಮೈದಾನವನ್ನು ತೊರೆಯಬೇಕಾಯಿತು. ಈ ಎರಡೂ ನಿರ್ಧಾರಗಳಿಗಾಗಿ ಅಂಪೈರ್ ಸುಂದರಂ ರವಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಪಂದ್ಯದಲ್ಲಿ ಸುಂದರಂ ರವಿ ಹೊರತಾಗಿ ನವದೀಪ್ ಸಿಂಗ್ ಕೂಡ ಅಂಪೈರ್ ಆಗಿದ್ದರು. ನಿತಿನ್ ಗೋಯಲ್ ಪಂದ್ಯದ ರೆಫರಿಯಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Sun, 26 January 25