AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಟಾದ ನಂತರವೂ ಬ್ಯಾಟಿಂಗ್ ಮುಂದುವರಿಸಿದ ಬ್ಯಾಟ್ಸ್‌ಮನ್; ವಿಡಿಯೋ ನೋಡಿ

ILT20 2025: ಗಲ್ಫ್ ಜೈಂಟ್ಸ್ ಮತ್ತು ಎಂಐ ಎಮಿರೇಟ್ಸ್ ನಡುವಿನ ILT20 ಪಂದ್ಯದಲ್ಲಿ, ಟಾಮ್ ಕರನ್ ರನ್ ಔಟ್ ಆದ ನಂತರವೂ ಬ್ಯಾಟಿಂಗ್ ಮುಂದುವರೆಸಿದ ಅಪರೂಪದ ಘಟನೆ ನಡೆದಿದೆ ಪಂದ್ಯದ ಕೊನೆಯ ಹಂತದಲ್ಲಿ ಈ ಘಟನೆ ನಡೆದಿದ್ದು, ಇದರಿಂದಾಗಿ ಪಂದ್ಯವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಯಿತು. ಎಂಐ ಎಮಿರೇಟ್ಸ್ ಆಟಗಾರರ ಕ್ರೀಡಾ ಮನೋಭಾವದಿಂದ ಕರನ್ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ಪಡೆದರು. ಅಂತಿಮವಾಗಿ ಗಲ್ಫ್ ಜೈಂಟ್ಸ್ ಗೆಲುವು ಸಾಧಿಸಿತು.

ಔಟಾದ ನಂತರವೂ ಬ್ಯಾಟಿಂಗ್ ಮುಂದುವರಿಸಿದ ಬ್ಯಾಟ್ಸ್‌ಮನ್; ವಿಡಿಯೋ ನೋಡಿ
Ilt20
ಪೃಥ್ವಿಶಂಕರ
|

Updated on:Jan 26, 2025 | 8:32 PM

Share

ಅಬುಧಾಬಿಯಲ್ಲಿ ನಡೆಯುತ್ತಿರುವ 2025 ರ ILT20 ಲೀಗ್​ನಲ್ಲಿ ಗಲ್ಫ್ ಜೈಂಟ್ಸ್ ಮತ್ತು ಎಂಐ ಎಮಿರೇಟ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಗಲ್ಫ್ ಜೈಂಟ್ಸ್ ತಂಡದ ಬ್ಯಾಟ್ಸ್‌ಮನ್ ರನೌಟ್​ಗೆ ಬಲಿಯಾದ ಬಳಿಕವೂ ಬ್ಯಾಟಿಂಗ್ ಮುಂದುವರೆಸಿದ ಅಪರೂಪದ ಘಟನೆ ನಡೆದಿದೆ. ಪಂದ್ಯದ ನಡುವೆ ನಡೆದ ಈ ನಾಟಕ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದಲ್ಲದೆ, ಮೈದಾನದಲ್ಲಿನ ಈ ನಾಟಕೀಯತೆಯಿಂದಾಗಿ ಆಟವು ಬಹಳ ಸಮಯದವರೆಗೆ ಸ್ಥಗಿತಗೊಂಡಿತು. ಅಷ್ಟಕ್ಕೂ ಈ ಪಂದ್ಯದ ನಡುವೆ ನಡೆದದ್ದಾದರೂ ಏನು? ಯಾವ ಬ್ಯಾಟ್ಸ್‌ಮನ್ ಔಟಾದ ಬಳಿಕವೂ ಬ್ಯಾಟಿಂಗ್‌ ಮುಂದುವರೆಸಿದ? ಆತ ಬ್ಯಾಟಿಂಗ್‌ ಮುಂದುವರೆಸಲು ಕಾರಣವೇನು ಎಂಬುದರ ಪೂರ್ಣ ವಿವರ ಇಲ್ಲಿದೆ.

ಜೈಂಟ್ಸ್- ಎಮಿರೇಟ್ಸ್ ನಡುವಿನ ಪಂದ್ಯ

ಗಲ್ಫ್ ಜೈಂಟ್ಸ್ ಮತ್ತು ಎಂಐ ಎಮಿರೇಟ್ಸ್ ನಡುವಿನ ಪಂದ್ಯದಲ್ಲಿ ಈ ನಾಟಕೀಯತೆ ಕಂಡುಬಂದಿತು. ಮೊದಲು ಬ್ಯಾಟಿಂಗ್ ಮಾಡಿದ ಎಂಐ ಎಮಿರೇಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಗಲ್ಫ್ ಜೈಂಟ್ಸ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಆದರೆ ಪಂದ್ಯ ಮುಗಿಯುವುದಕ್ಕೂ ಸ್ವಲ್ಪ ಮೊದಲು, ಮೈದಾನದಲ್ಲಿ ಅಪರೂಪದ ಘಟನೆಯೊಂದು ನಡೆಯಿತು.

ಅಷ್ಟಕ್ಕೂ ನಡೆದಿದ್ದೇನೆಂದರೆ, ಗಲ್ಫ್ ಜೈಂಟ್ಸ್ ಇನ್ನಿಂಗ್ಸ್‌ನ 18 ನೇ ಓವರ್‌ನ ಕೊನೆಯ ಎಸೆತವನ್ನು ಆಡಿದ ಮಾರ್ಕ್ ಅಡೈರ್, ಈ ಚೆಂಡನ್ನು ಲಾಂಗ್-ಆಫ್ ಕಡೆಗೆ ಆಡಿ ಸಿಂಗಲ್ ತೆಗೆದುಕೊಳ್ಳುತ್ತಾರೆ. ಇಬ್ಬರೂ ಆಟಗಾರರು ಓಟವನ್ನು ಪೂರ್ಣಗೊಳಿಸಿದರಾದರೂ ಟಾಮ್ ಕರನ್ ಕ್ರೀಸ್​ನಿಂದ ಹೊರಬಂದರು. ಈ ವೇಳೆ ಓವರ್ ಮುಗಿದಿತ್ತಾದರೂ ಚೆಂಡು ಇನ್ನೂ ಫೀಲ್ಡರ್ ಕೈಯಲ್ಲಿಯೇ ಇತ್ತು. ಕೀರನ್ ಪೊಲಾರ್ಡ್ ಚೆಂಡನ್ನು ಎಂಐ ಎಮಿರೇಟ್ಸ್ ನಾಯಕ ಮತ್ತು ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕಡೆಗೆ ಎಸೆದರು. ರನ್ ಪೂರ್ಣಗೊಳಿಸಿದ ನಂತರ ಟಾಮ್ ಕ್ರೀಸ್ ಬಿಟ್ಟ ಕಾರಣ ಪೂರನ್ ತಕ್ಷಣವೇ ಸ್ಟಂಪ್‌ ಮಾಡಿದರು. ಇದಾದ ನಂತರ, ಅಂಪೈರ್‌ಗೆ ರನ್ ಔಟ್‌ಗೆ ಮನವಿ ಮಾಡಲಾಯಿತು.

ಕರನ್​ಗೆ ಬ್ಯಾಟಿಂಗ್ ಅವಕಾಶ

ಈ ವಿಷಯದ ಬಗ್ಗೆ ಪೂರಾನ್ ಇಬ್ಬರೂ ಫೀಲ್ಡ್ ಅಂಪೈರ್‌ಗಳೊಂದಿಗೆ ಮಾತನಾಡಿದರು. ಇದಾದ ನಂತರ ತೀರ್ಪು ಪ್ರಕಟಿಸಿದ ಮೂರನೇ ಅಂಪೈರ್, ಕರನ್ ಅವರನ್ನು ಔಟ್ ಎಂದು ಘೋಷಿಸಿದರು. ಆದರೆ ಮೈದಾನದ ಹೊರಗೆ ಬೌಂಡರಿಯ ಬಳಿ ನಿಂತಿದ್ದ ಗಲ್ಫ್ ಜೈಂಟ್ಸ್ ತರಬೇತುದಾರ ಆಂಡಿ ಫ್ಲವರ್ ಇದರಿಂದ ಕೋಪಗೊಂಡು ಟಾಮ್‌ಗೆ ಮೈದಾನದಲ್ಲಿಯೇ ಇರುವಂತೆ ಸೂಚಿಸಿದರು. ಪಂದ್ಯವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಯಿತು. ಇದಾದ ನಂತರ, ಹೃದಯ ವೈಶಾಲ್ಯತೆ ಮೆರೆದ ಎಮಿರೇಟ್ಸ್ ತಂಡದ ಆಟಗಾರರು ಕರನ್ ಬ್ಯಾಟಿಂಗ್ ಮುಂದುವರೆಸಲು ಅನುಮತಿ ನೀಡಿದರು.

ಎಂಐ ಎಮಿರೇಟ್ಸ್ ಆಟಗಾರರು ತೋರಿದ ಕ್ರೀಡಾ ಮನೋಭಾವದಿಂದ ಟಾಮ್ ಕರನ್​ಗೆ ಮತ್ತೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿತು. ಆದಾಗ್ಯೂ ಕೊನೆಯ ಓವರ್‌ನಲ್ಲಿ ಔಟಾದ ಟಾಮ್ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಗಲ್ಫ್ ಜೈಂಟ್ಸ್ ತಂಡಕ್ಕೆ ಗೆಲ್ಲಲು ಒಂದು ರನ್ ಬೇಕಿತ್ತು. ಕೊನೆಯ ರನ್ ಗಳಿಸುವ ಮೂಲಕ, ಗಲ್ಫ್ ಜೈಂಟ್ಸ್ ಈ ರೋಮಾಂಚಕಾರಿ ಪಂದ್ಯವನ್ನು ಎರಡು ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Sun, 26 January 25