ಟೀಮ್ ಇಂಡಿಯಾದ (Team India) ಹೊಸ ಕೋಚ್ ಆಗಿ ದಿ ಲೆಜೆಂಡ್ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಸರಣಿಯೊಂದಿಗೆ ದ್ರಾವಿಡ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಭಾರತ ಪರ 164 ಟೆಸ್ಟ್, 344 ಏಕದಿನ ಹಾಗೂ 1 ಟಿ20 ಪಂದ್ಯವಾಡಿರುವ ದ್ರಾವಿಡ್, ಟೀಮ್ ಇಂಡಿಯಾ ಹೊರತಾಗಿ ಮತ್ತೊಂದು ದೇಶವನ್ನೂ ಕೂಡ ಪ್ರತಿನಿಧಿಸಿದ್ದರು ಎಂಬುದು ವಿಶೇಷ.
ಹೌದು, ರಾಹುಲ್ ದ್ರಾವಿಡ್ ಅವರು 2003 ರಲ್ಲಿ ಸ್ಕಾಟ್ಲೆಂಡ್ ಪರ ಕಣಕ್ಕಿಳಿದಿದ್ದರು. ಕುತೂಹಲಕಾರಿ ಅಂಶವೆಂದರೆ ಅಂದು ತಂಡದಲ್ಲಿದ್ದ ಯುವ ಆಟಗಾರ ಇಂದು ಸ್ಕಾಟ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಅಂದರೆ ಇಂದಿನ ಸ್ಕಾಟ್ಲೆಂಡ್ ತಂಡದ ನಾಯಕ ಕೈಲ್ ಕೊಯೆಟ್ಜರ್ ಅವರು ರಾಹುಲ್ ದ್ರಾವಿಡ್ ಅವರ ಟೀಮ್ ಮೇಟ್.
2003 ರಲ್ಲಿ ದ್ರಾವಿಡ್ ಅವರನ್ನು ಜಾನಿ ರೈಟ್ ಅವರು ಸ್ಕಾಟ್ಲೆಂಡ್ ಪರ ಆಡುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಬಿಸಿಸಿಐ ಅನುಮತಿ ಪಡೆದು ದ್ರಾವಿಡ್ ಅವರು 12 ಏಕದಿನ ಪಂದ್ಯಗಳನ್ನಾಡಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನ್ ವಿರುದ್ದ ಕೂಡ ದ್ರಾವಿಡ್ ಸ್ಕಾಟ್ಲೆಂಡ್ ಪರ ಕಣಕ್ಕಿಳಿದಿದ್ದರು.
ಸ್ಕಾಟ್ಲೆಂಡ್ ಪರ 11 ಕೌಂಟಿ ಪಂದ್ಯಗಳನ್ನು ಪಂದ್ಯಗಳನ್ನಾಡಿರುವ ದ್ರಾವಿಡ್ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ಒಟ್ಟು 12 ಪಂದ್ಯಗಳ ಮೂಲಕ 92.73 ರ ಸ್ಟ್ರೈಕ್ ರೇಟ್‌ನೊಂದಿಗೆ 66.66 ರಲ್ಲಿ 600 ರನ್ ಕಲೆಹಾಕಿದ್ದರು. ಇದರಲ್ಲಿ 3 ಶತಕ ಹಾಗೂ 2 ಅರ್ಧಶತಕಗಳು ಮೂಡಿಬಂದಿದ್ದವು. ಆದರೆ ಆ ಸೀಸನ್ನಲ್ಲಿ ಸ್ಕಾಟ್ಲೆಂಡ್ ಗೆದ್ದಿದ್ದು ಕೇವಲ 1 ಪಂದ್ಯ ಮಾತ್ರ.
ಅಂದು ದ್ರಾವಿಡ್ ಅವರೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದ 19 ವರ್ಷದ ಕೈಲ್ ಕೊಯೆಟ್ಜರ್ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮುನ್ನಡೆಸಿರುವುದು ವಿಶೇಷ. ಈ ಬಗ್ಗೆ ಮಾತನಾಡಿರುವ ಕೈಲ್, ದ್ರಾವಿಡ್ ಅವರು ತುಂಬಾ ವಿನಮ್ರ ವ್ಯಕ್ತಿ. ತುಂಬಾ ಗೌರವ ನೀಡುತ್ತಾರೆ. ಎಲ್ಲಾ ಆಟಗಾರರೊಂದಿಗೆ ಬೆರೆತು ಉತ್ತಮ ಸಂವಹನ ನಡೆಸುತ್ತಿದ್ದಾರೆ. ಅವರೊಬ್ಬರು ಅದ್ಭುತ ವ್ಯಕ್ತಿ ಎಂದು ತಿಳಿಸಿದ್ದಾರೆ.
ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಾಲ್ಕು ವರ್ಷಗಳ ಕಾಲ ಕೋಚ್ ಆಗಿ ಸೇವೆ ಸಲ್ಲಿಸಿದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಸೀನಿಯರ್ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಇತ್ತ ಕಳೆದ 8 ವರ್ಷಗಳಿಂದ ಐಸಿಸಿ ಟ್ರೋಫಿ ಮರೀಚಿಕೆಯಾಗಿರುವ ಭಾರತ ತಂಡವು ದ್ರಾವಿಡ್ ಸಾರಥ್ಯದಲ್ಲಿ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Rahul Dravid played 12 games for Scotland in 2003)