Rahul Dravid: NCA ಗೆ ಅರ್ಜಿ ಸಲ್ಲಿಸಿದ ರಾಹುಲ್ ದ್ರಾವಿಡ್: ಟೀಮ್ ಇಂಡಿಯಾ ಕೋಚ್ ಆಗೋದು ಡೌಟ್

| Updated By: ಝಾಹಿರ್ ಯೂಸುಫ್

Updated on: Aug 18, 2021 | 10:06 PM

Rahul Dravid Team India Coach: ಈ ಹಿಂದೆ ರಾಹುಲ್ ದ್ರಾವಿಡ್ ಅಂಡರ್ -19 ಮತ್ತು ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಭಾರತೀಯ ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಅನೇಕ ಆಟಗಾರರಿದ್ದಾರೆ.

Rahul Dravid: NCA ಗೆ ಅರ್ಜಿ ಸಲ್ಲಿಸಿದ ರಾಹುಲ್ ದ್ರಾವಿಡ್: ಟೀಮ್ ಇಂಡಿಯಾ ಕೋಚ್ ಆಗೋದು ಡೌಟ್
Rahul Dravid
Follow us on

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥನ ಹುದ್ದೆಗೆ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಮರು ಅರ್ಜಿ ಸಲ್ಲಿಸಿದ್ದಾರೆ. ಇದಾಗ್ಯೂ ಬೇರೆ ಯಾರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂಬುದು ವಿಶೇಷ. ಹೀಗಾಗಿ ಬಿಸಿಸಿಐ ಹಾಲಿ ಎನ್​ಸಿಎ (NCA) ಮುಖಸ್ಥರಾಗಿರುವ ದ್ರಾವಿಡ್ ಅವರನ್ನೇ ಮುಂದುವರೆಸುವ ಸಾಧ್ಯತೆಯಿದೆ. ಇದರೊಂದಿಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಟಿ20 ವಿಶ್ವಕಪ್ (T20 World Cup 2021) ಬಳಿಕ ಟೀಮ್ ಇಂಡಿಯಾ (Team India) ಕೋಚ್ ರವಿ ಶಾಸ್ತ್ರಿ ಕಾರ್ಯಾವಧಿ ಪೂರ್ಣಗೊಳ್ಳಲಿದೆ. ಆನಂತರದ ಭಾರತದ ತಂಡದ ಕೋಚ್ ಆಗಿ ಯಾರು ಆಯ್ಕೆ ಆಗಲಿದ್ದಾರೆ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ.

ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಕೋಚ್ ಜವಾಬ್ದಾರಿಯನ್ನು ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಮುಂದಿನ ಕೋಚ್ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ಈಗೇನು ನಾನು ಹೇಳುವುದಿಲ್ಲ. ಲಂಕಾ ಸರಣಿ ವೇಳೆ ನೀಡಲಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದು ದ್ರಾವಿಡ್ ತಿಳಿಸಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥನ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಹೀಗಾಗಿ ಟೀಮ್ ಇಂಡಿಯಾಗೆ ಕೋಚ್ ಆಗಲಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಆದರೆ ಇದೀಗ ತಮ್ಮ ಪ್ರಸ್ತುತ ಹುದ್ದೆಯಲ್ಲೇ ಮುಂದುವರೆಯಲು ರಾಹುಲ್ ದ್ರಾವಿಡ್ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಎನ್​ಸಿಎ ಮುಖ್ಯಸ್ಥನ ಹುದ್ದೆಗೆ ಮರು ಅರ್ಜಿ ಸಲ್ಲಿಸಿದ್ದಾರೆ. ಇದಾಗ್ಯೂ ಬೇರೆ ಯಾರೂ ಕೂಡ ಅರ್ಜಿ ಸಲ್ಲಿಸದ ಕಾರಣ ಬಿಸಿಸಿಐ, ಮತ್ತೆ ಅರ್ಜಿ ಸಲ್ಲಿಕೆಯ ಗಡುವುವನ್ನು ಇನ್ನೂ ಕೆಲ ದಿನಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಬಿಸಿಸಿಐಯ ಈ ನಡೆ ಕೂಡ ಈಗ ಕುತೂಹಲ ಮೂಡಿಸಿದೆ.

ಈ ಹಿಂದೆ ರಾಹುಲ್ ದ್ರಾವಿಡ್ ಅಂಡರ್ -19 ಮತ್ತು ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಭಾರತೀಯ ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಅನೇಕ ಆಟಗಾರರಿದ್ದಾರೆ. ಹೀಗಾಗಿ ಅವರನ್ನೇ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಎನ್​ಸಿಎ ಪೋಸ್ಟ್​ಗೆ ಮರು ಅರ್ಜಿ ಸಲ್ಲಿಸುವ ಮೂಲಕ ಸದ್ಯಕ್ಕೆ ದ್ರಾವಿಡ್ ತಾವು ಮುಂದಿನ ಕೋಚ್ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಎನ್‌ಸಿಎ ಮುಖ್ಯಸ್ಥರ ಕಾರ್ಯವೇನು?
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಕೋಚಿಂಗ್ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿಯನ್ನು NCA ಮುಖ್ಯಸ್ಥರು ಹೊಂದಿರುತ್ತಾರೆ. ಇದರ ಹೊರತಾಗಿ ಅಕಾಡೆಮಿಯ ತರಬೇತಿಯಲ್ಲಿ ಭಾಗವಹಿಸುವ ಎಲ್ಲ ಕ್ರಿಕೆಟಿಗರ ತಯಾರಿ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಗಾಗಿ ಮಾರ್ಗದರ್ಶನ ನೀಡುತ್ತಾರೆ. NCA ಮುಖ್ಯಸ್ಥರು ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ತಂಡಗಳ ಮುಖ್ಯ ತರಬೇತುದಾರರು ಮತ್ತು ಇತರ ಕ್ರಿಕೆಟ್ ತರಬೇತುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಇದು ಭಾರತ ಎ, ಅಂಡರ್ 19, ಅಂಡರ್ 23, ಭಾರತ ಮಹಿಳಾ ತಂಡವನ್ನು ಒಳಗೊಂಡಿದೆ. ತಂಡಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಎನ್​ಸಿಎ ಮುಖ್ಯಸ್ಥರು ಹೊಂದಿರುತ್ತಾರೆ. ಹಾಗೆಯೇ ಟೀಮ್ ಇಂಡಿಯಾ ಪುರುಷರ ಮತ್ತು ಮಹಿಳಾ ಮುಖ್ಯ ತರಬೇತುದಾರರಿಗೆ ಆಟಗಾರರ ಕುರಿತಾದ ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

 

(Rahul Dravid reapplied for NCA Head)