
ಟೀಮ್ ಇಂಡಿಯಾದ (Team India) ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಶಾಲಾ ಕ್ರಿಕೆಟ್‌ನಲ್ಲಿ ಬಾರಿಸಿದ ಮೊದಲ ಶತಕ ದ್ರಾವಿಡ್ ಪಾಲಿಗೆ ಇನ್ನೂ ಕೂಡ ನೆನಪಿದೆ. ಇದಕ್ಕೆ ಒಂದು ಕಾರಣ ಅವರ ಹೆಸರು. ಆ ಒಂದು ಹೆಸರು ಅವರಿಗೆ ಹೊಸ ಪಾಠ ಕಲಿಸಿತು. ಪರಿಣಾಮ ರಾಹುಲ್ ಡೇವಿಡ್…ಆ ಬಳಿಕ ರಾಹುಲ್ ದ್ರಾವಿಡ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದ್ದು ಈಗ ಇತಿಹಾಸ.
ಹೌದು, ರಾಹುಲ್ ದ್ರಾವಿಡ್ ಇತ್ತೀಚೆಗೆ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಅವರ ಪಾಡ್‌ಕಾಸ್ಟ್ ‘ಇನ್ ದಿ ಝೋನ್’ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಶಾಲಾ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡಿದ್ದರು.
ಅದು ಶಾಲಾ ಕ್ರಿಕೆಟ್. ನಾನು ಮೊದಲ ಶತಕ ಬಾರಿಸಿದ್ದೆ. ಮರುದಿನ ಪತ್ರಿಕೆಯಲ್ಲಿ ನನ್ನ ಹೆಸರು ಬಂದಿತ್ತು. ಆದರೆ ಅದನ್ನು ತಪ್ಪಾಗಿ ಮುದ್ರಿಸಲಾಗಿತ್ತು. ರಾಹುಲ್ ದ್ರಾವಿಡ್ ಬದಲಿಗೆ ರಾಹುಲ್ ಡೇವಿಡ್ ಎಂದು ಬರೆಯಲಾಗಿತ್ತು. ಅಂದು ಪತ್ರಿಕೆ ಸಂಪಾದಕರು ಡೇವಿಡ್ ಹೆಸರು ಸ್ಪೆಲಿಂಗ್ ಮಿಸ್ಟೇಕ್ನಿಂದ ದ್ರಾವಿಡ್ ಆಗಿದೆ ಎಂದು ಭಾವಿಸಿರಬೇಕು. ಹಾಗಾಗಿ ರಾಹುಲ್ ಡೇವಿಡ್ ಎಂದು ಬರೆದಿರಬಹುದು ಎಂದು ಇದೇ ದ್ರಾವಿಡ್ ಹೇಳಿದರು.
ಈ ಒಂದು ಘಟನೆಯು ನನ್ನ ಪಾಲಿಗೆ ದೊಡ್ಡ ಪಾಠ ಕೂಡ ಆಗಿತ್ತು. ಏಕೆಂದರೆ ನಾನು ಶಾಲಾ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಉತ್ಸುಕನಾಗಿದ್ದೆ. ಆದರೆ ಇದೇ ವೇಳೆ ನನ್ನ ಹೆಸರು ಯಾರಿಗೂ ಸರಿಯಾಗಿ ಗೊತ್ತಿಲ್ಲ ಎಂಬುದು ನಾನು ಅರಿತುಕೊಂಡೆ. ಪತ್ರಿಕೆಯಲ್ಲಿ ಮೂಡಿಬಂದ ತಪ್ಪಿನಿಂದಾಗಿ ನಾನು ಜನಪ್ರಿಯನಲ್ಲ ಎಂಬುದು ಗೊತ್ತಾಯಿತು ಎಂದು ರಾಹುಲ್ ದ್ರಾವಿಡ್ ಇದೇ ವೇಳೆ ತಿಳಿಸಿದರು.
ಇನ್ನು ಅಭಿನವ್ ಬಿಂದ್ರಾ ಅವರ ಬೀಜಿಂಗ್ ಒಲಿಂಪಿಕ್ ಚಿನ್ನದ ಗೆಲುವು ತಮ್ಮ ವೃತ್ತಿಜೀವನವನ್ನು ಮರಳಿ ಟ್ರ್ಯಾಕ್ ಬರಲು ಹೇಗೆ ಪ್ರೇರೇಪಿಸಿತು ಎಂಬುದನ್ನು ಸಹ ರಾಹುಲ್ ದ್ರಾವಿಡ್ ವಿವರಿಸಿದರು. 2008 ರಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಿಂದ್ರಾ ಪಾತ್ರರಾಗಿದ್ದರು.
ಇದೇ ವೇಳೆ ನಾನು ವೃತ್ತಿಜೀವನದಲ್ಲಿ ಕೆಟ್ಟ ಹಂತವನ್ನು ಎದುರಿಸುತ್ತಿದ್ದೆ. ನನ್ನ ಬ್ಯಾಟ್‌ನಿಂದ ರನ್‌ಗಳು ಬರುತ್ತಿರಲಿಲ್ಲ ಮತ್ತು ವಯಸ್ಸು ಕೂಡ ಹೆಚ್ಚಾಗುತ್ತಿತ್ತು. ನೀವು ಭಾರತೀಯ ಕ್ರಿಕೆಟ್‌ನಲ್ಲಿ ಈ ರೀತಿಯಾಗಿ ಸಿಲುಕಿಕೊಂಡರೆ ಅದು ಒಳ್ಳೆಯದಲ್ಲ. ನನ್ನಲ್ಲಿ ಇನ್ನೂ ಕೆಲವು ವರ್ಷಗಳ ಕ್ರಿಕೆಟ್ ಉಳಿದಿದೆ ಎಂದು ನನಗೆ ತಿಳಿದಿತ್ತು.
ಆ ಸಮಯದಲ್ಲಿ ನಾನು ಬೀಜಿಂಗ್‌ನಲ್ಲಿ ಅಭಿನವ್ ಬಿಂದ್ರಾ ಒಲಿಂಪಿಕ್ ಚಿನ್ನ ಗೆದ್ದಿದ್ದನ್ನು ನೋಡಿದೆ. ಅಭಿನವ್ ಚಿನ್ನ ಗೆದ್ದ ನಂತರ ನಾನು ಅನುಭವಿಸಿದ ಉತ್ಸಾಹ ಇನ್ನೂ ನೆನಪಿದೆ. ಇದಾದ ನಂತರ ನಾನು ಅಭಿನವ್ ಅವರ ಆತ್ಮಕಥೆಯನ್ನು ಓದಿದೆ. ಶ್ರೇಷ್ಠತೆಯನ್ನು ಬಯಸುವವರು ಅಭಿನವ್ ಅವರ ಈ ಪುಸ್ತಕವನ್ನು ಓದಬೇಕು ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದರು.
ಅಭಿನವ್ ಬಿಂದ್ರಾ ಅವರ ಈ ಯಶಸ್ಸು ನನಗೆ ಹೊಸ ಸ್ಫೂರ್ತಿ ನೀಡಿತು. ಏಕೆಂದರೆ ಬಿಂದ್ರಾ ಕೂಡ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳದೆ, ಮುನ್ನುಗ್ಗಿದ್ದಾರೆ. ಅಂತಹ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದರು.