Team India: ರಾಹುಲ್ ದ್ರಾವಿಡ್ ಮಾಸ್ಟರ್​ ಪ್ಲ್ಯಾನ್: ಟಿ20 ವಿಶ್ವಕಪ್​ಗೆ ಬೇಗನೆ ತೆರಳಲಿದೆ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 22, 2022 | 11:10 AM

India Squad For T20 World Cup 2022: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ,.

Team India: ರಾಹುಲ್ ದ್ರಾವಿಡ್ ಮಾಸ್ಟರ್​ ಪ್ಲ್ಯಾನ್: ಟಿ20 ವಿಶ್ವಕಪ್​ಗೆ ಬೇಗನೆ ತೆರಳಲಿದೆ ಟೀಮ್ ಇಂಡಿಯಾ
Team India
Follow us on

T20 World Cup 2022: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾ (Team India) ಭರ್ಜರಿ ಯೋಜನೆಗಳನ್ನು ರೂಪಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಎರಡು ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ಪೂರ್ವಭ್ಯಾಸ ಎಂಬುದು ವಿಶೇಷ. ಇದಾದ ಬಳಿಕ ಅಕ್ಟೋಬರ್ 9 ರಂದು ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಬೇಕಿತ್ತು. ಆದರೀಗ ಅದಕ್ಕೂ ಒಂದು ವಾರ ಮುಂಚಿತವಾಗಿ ಭಾರತ ತಂಡ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡವನ್ನು ಬೇಗನೆ ಕಳುಹಿಸಿಕೊಡುವಂತೆ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚಿನ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ.

ದ್ರಾವಿಡ್ ಅವರ ಮನವಿಗೆ ಬಿಸಿಸಿಐ ಕೂಡ ಸ್ಪಂದಿಸಿದ್ದು, ಹೀಗಾಗಿ ಅಕ್ಟೋಬರ್ 9 ರ ಬದಲು ಟೀಮ್ ಇಂಡಿಯಾ ಅಕ್ಟೋಬರ್ 5 ರಂದೇ ಆಸ್ಟ್ರೇಲಿಯಾಗೆ ತೆರಳಲಿದೆ ಎಂದು ವರದಿಯಾಗಿದೆ. ಅಂದರೆ ಒಂದು ವಾರ ಮುಂಚಿತವಾಗಿ ತೆರಳುವ ಮೂಲಕ ಭಾರತ ತಂಡವು ಆಸ್ಟ್ರೇಲಿಯಾ 2-3 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಮೂಲಕ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ಲ್ಯಾನ್ ರೂಪಿಸಿದೆ.

ಅಕ್ಟೋಬರ್ 4 ರಂದು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಕ್ತಾಯವಾಗಲಿದ್ದು, ಇದರ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ  ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಇನ್ನು ಭಾರತ ತಂಡದೊಂದಿಗೆ ನೆಟ್ ಬೌಲರ್‌ಗಳು ಮತ್ತು ಸ್ಟ್ಯಾಂಡ್‌ಬೈ ಆಟಗಾರರನ್ನು ಕಳುಹಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೆಟ್ ಬೌಲರ್​ಗಳು ಹಾಗೂ ಮೀಸಲು ಆಟಗಾರರನ್ನು ಒಳಗೊಂಡ ತಂಡವು ವಿಶ್ವಕಪ್​ಗೂ ಮುಂಚಿತವಾಗಿ ತೆರಳುವುದರಿಂದ ಪ್ರಮುಖ ಆಟಗಾರರು ಹೆಚ್ಚಿನ ಸಮಯ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. ಹೀಗಾಗಿ ಟಿ20 ವಿಶ್ವಕಪ್​ ಆರಂಭಕ್ಕೂ 10 ದಿನಗಳು ಮುಂಚಿತವಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಠಿಕಾಣಿ ಹೂಡಲಿದ್ದಾರೆ.

ವಿಶೇಷ ಎಂದರೆ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನ್ ವಿರುದ್ಧ ಆಡಲಿದೆ. ಆದರೆ ಅದಕ್ಕೂ ಮುನ್ನ, ಅಂದರೆ ಅಕ್ಟೋಬರ್ 17 ರಂದು ನ್ಯೂಜಿಲೆಂಡ್ ಹಾಗೂ ಅಕ್ಟೋಬರ್ 18 ರಂದು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಅದರಂತೆ ಸೂಪರ್-12 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದೊಂದಿಗೆ ಕಣಕ್ಕಿಳಿಯಲು ಪ್ಲ್ಯಾನ್ ರೂಪಿಸಿದೆ.

ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಹೀಗಿದೆ:

 ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್

 

 

 

 

Published On - 11:10 am, Thu, 22 September 22