‘ರಾಹುಲ್ ದ್ರಾವಿಡ್‌ಗೆ ಭಾರತ ರತ್ನ ನೀಡಿ’; ಮಾಜಿ ಟೀಂ ಇಂಡಿಯಾ ನಾಯಕನ ಒತ್ತಾಯ
Rahul Dravid: ರಾಹುಲ್ ದ್ರಾವಿಡ್ ಒಬ್ಬ ಆಟಗಾರ ಮತ್ತು ನಾಯಕನಾಗಿ ಭಾರತಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಟಗಾರನಾಗಿ ದ್ರಾವಿಡ್ ತಂಡಕ್ಕೆ ಹಲವು ಕ್ಲಿಷ್ಟಕರ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ ಮತ್ತು ನಾಯಕನಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ತಂಡಕ್ಕೆ ಕಷ್ಟವಾದಾಗ ವಿದೇಶಿ ನೆಲದಲ್ಲಿ ಸರಣಿ ಗೆಲ್ಲುವಂತೆ ಮಾಡಿದ್ದಾರೆ. ಹೀಗಾಗಿ ದ್ರಾವಿಡ್ ಈ ಗೌರವವನ್ನು ಕೋಚ್ ಆಗಿ ಅಲ್ಲ ಯಶಸ್ವಿ ಆಟಗಾರ ಮತ್ತು ನಾಯಕನಾಗಿ ಪಡೆಯಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಟೀಂ ಇಂಡಿಯಾವನ್ನು 2024 ರ ಟಿ20 ವಿಶ್ವಕಪ್ ಚಾಂಪಿಯನ್ ಮಾಡುವುದರೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಕೊನೆಯ ಪಂದ್ಯ ಯಾವಾಗಲೂ ಸ್ಮರಣೀಯವಾಗಿರಲಿದ್ದು, ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ ಅಜೇಯವಾಗಿ ಉಳಿದು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು. ಇದಲ್ಲದೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ಆಡಿತ್ತು. ಹೀಗಾಗಿ ರಾಹುಲ್ ದ್ರಾವಿಡ್ ಕೋಚ್ ಆಗಿ ಬಹಳ ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಗುರು ರಾಹುಲ್ ದ್ರಾವಿಡ್‌ಗೆ ಭಾರತ ರತ್ನ ನೀಡಿ ಗೌರವಿಸುವಂತೆ ಮನವಿ ಮಾಡಿದ್ದಾರೆ.
ಸುನಿಲ್ ಗವಾಸ್ಕರ್ ಒತ್ತಾಯ
ರಾಹುಲ್ ದ್ರಾವಿಡ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುವಂತೆ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಧ್ವನಿ ಎತ್ತಿದ್ದಾರೆ. ಈ ಗೌರವ ರಾಹುಲ್ ದ್ರಾವಿಡ್‌ಗೆ ಸಿಗಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಭಾರತ ರತ್ನ, ಭಾರತದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ರಾಹುಲ್ ದ್ರಾವಿಡ್ ಟೀಂ ಇಂಡಿಯಾಗೆ ಆಟಗಾರ ಹಾಗೂ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದಾರೆ. 2007 ಮತ್ತು 2011ರ ವಿಶ್ವಕಪ್ ಬಳಿಕ ಟೀಂ ಇಂಡಿಯಾ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿತ್ತು. ಇದಾದ ಬಳಿಕ ಕಳೆದ 11 ವರ್ಷಗಳಿಂದ ತಂಡಕ್ಕೆ ಯಾವುದೇ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2022ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಆದ ಮೇಲೆ ಎಲ್ಲವೂ ಬದಲಾಯಿತು. ಈಗ ತಂಡವು ಟಿ20 ಕ್ರಿಕೆಟ್‌ನ ಚಾಂಪಿಯನ್ ಮತ್ತು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ರನ್ನರ್ ಅಪ್ ಆಗಿದೆ.
ಕೋಚ್ ಆಗಿ ಬೇಡ
ರಾಹುಲ್ ದ್ರಾವಿಡ್ ಈ ಗೌರವವನ್ನು ಕೋಚ್ ಆಗಿ ಅಲ್ಲ ಯಶಸ್ವಿ ಆಟಗಾರ ಮತ್ತು ನಾಯಕನಾಗಿ ಪಡೆಯಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಒಬ್ಬ ಆಟಗಾರ ಮತ್ತು ನಾಯಕನಾಗಿ ಭಾರತಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಟಗಾರನಾಗಿ ದ್ರಾವಿಡ್ ತಂಡಕ್ಕೆ ಹಲವು ಕ್ಲಿಷ್ಟಕರ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ ಮತ್ತು ನಾಯಕನಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ತಂಡಕ್ಕೆ ಕಷ್ಟವಾದಾಗ ವಿದೇಶಿ ನೆಲದಲ್ಲಿ ಸರಣಿ ಗೆಲ್ಲುವಂತೆ ಮಾಡಿದ್ದಾರೆ. ಇದೀಗ ದ್ರಾವಿಡ್ ಕೋಚ್ ಆಗಿಯೂ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. ರಾಹುಲ್ ದ್ರಾವಿಡ್‌ಗೆ ಭಾರತ ರತ್ನ ನೀಡಲು ಸರ್ಕಾರಕ್ಕೆ ಇದು ಸರಿಯಾದ ಸಮಯ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ದ್ರಾವಿಡ್ ವೃತ್ತಿಜೀವನ ಹೇಗಿತ್ತು?
ರಾಹುಲ್ ದ್ರಾವಿಡ್ ಭಾರತ ಪರ 164 ಟೆಸ್ಟ್ ಪಂದ್ಯಗಳನ್ನಾಡಿದ್ದು, 13288 ರನ್ ಬಾರಿಸಿದ್ದಾರೆ. ಇದರಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳು ಸೇರಿದ್ದು, 5 ದ್ವಿಶತಕಗಳನ್ನೂ ದ್ರಾವಿಡ್ ಬಾರಿಸಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳಲ್ಲಿ 10889 ರನ್ ಬಾರಿಸಿರುವ ಅವರು 12 ಶತಕ ಮತ್ತು 83 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೆ, ರಾಹುಲ್ ದ್ರಾವಿಡ್ ಭಾರತದ ಪರ ಕೇವಲ 1 ಟಿ20 ಪಂದ್ಯವನ್ನು ಆಡಿದ್ದು, ಇದರಲ್ಲಿ ಅವರು 31 ರನ್ ಬಾರಿಸಿದ್ದಾರೆ.