Champions Trophy 2025: ಟೀಮ್ ಇಂಡಿಯಾ ಪಂದ್ಯಗಳಿಗೆ ದಿನಾಂಕ ನಿಗದಿ
Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಢಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಅದರಂತೆ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ.
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ. ಈ ದಿನಾಂಕ ನಿಗದಿಯ ಬೆನ್ನಲ್ಲೇ ಟೀಮ್ ಇಂಡಿಯಾದ ಪಂದ್ಯಗಳ ಕರಡು ವೇಳಾಪಟ್ಟಿ ಕೂಡ ಹೊರಬಿದ್ದಿದೆ. ಈ ವೇಳಾಪಟ್ಟಿಯಂತೆ ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ ಟೀಮ್ ಇಂಡಿಯಾದ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ…
- ಫೆಬ್ರವರಿ 20, 2025: ಭಾರತ Vs ಬಾಂಗ್ಲಾದೇಶ್
- ಫೆಬ್ರವರಿ 23, 2025: ಭಾರತ Vs ನ್ಯೂಝಿಲೆಂಡ್
- ಮಾರ್ಚ್ 1, 2025: ಭಾರತ Vs ಪಾಕಿಸ್ತಾನ್.
ಒಂದೇ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಪಂದ್ಯಗಳು:
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಅಲ್ಲದೆ ಈ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದ್ದು, ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ.
ಇಲ್ಲಿ ಟೀಮ್ ಇಂಡಿಯಾ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ಆಡಲಿದೆ ಎಂದು ವರದಿಯಾಗಿದೆ.
ಲಾಹೋರ್ನಲ್ಲೇ ಯಾಕೆ?
ಲಾಹೋರ್ ನಗರವು ಭಾರತದ ಗಡಿಗೆ ಸಮೀಪದಲ್ಲಿದೆ. ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಫ್ಯಾನ್ಸ್ಗಳಿಗೆ ಅನುಕೂಲ ಕಲ್ಪಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಂದೇ ಸ್ಟೇಡಿಯಂನಲ್ಲಿ ಭಾರತ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದೆ.
ಭಾರತ ತಂಡ ಪಾಕ್ಗೆ ತೆರಳಲಿದೆಯಾ?
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವುದರಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ 2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಈ ಬಾರಿ ಪಾಕ್ನಲ್ಲಿ ಐಸಿಸಿ ಟೂರ್ನಿ ನಡೆಯುತ್ತಿರುವುದರಿಂದ ಭಾರತ ತಂಡಕ್ಕೆ ತೆರಳಬೇಕಾದ ಒತ್ತಡದಲ್ಲಿದೆ.
ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಟೂರ್ನಿಗಾಗಿ ಸಕಲ ಸಿದ್ಧತೆಯಲ್ಲಿದ್ದು, ಇತ್ತ ಬಿಸಿಸಿಐ ಜಾಣ ಮೌನದಲ್ಲಿದೆ. ಅದರಲ್ಲೂ ಪಿಸಿಬಿ ದಿನಾಂಕ, ಸ್ಟೇಡಿಯಂ ನಿಗದಿ ಮಾಡಿದರೂ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.
ಒಂದು ವೇಳೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಿದರೆ ಮಾತ್ರ ಟೀಮ್ ಇಂಡಿಯಾ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಇಲ್ಲದಿದ್ದರೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ಐಸಿಸಿಗೆ ಮನವಿ ಮಾಡಬಹುದು.
ಐಸಿಸಿ ಈ ಮನವಿಗೆ ಒಪ್ಪದಿದ್ದರೆ ಟೀಮ್ ಇಂಡಿಯಾದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಕೋರಬಹುದು. ಈ ಮೂಲಕ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಆಡುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೋಫಿ ತಂಡಗಳು:
- ಗ್ರೂಪ್-A
- ಭಾರತ
- ಪಾಕಿಸ್ತಾನ್
- ಬಾಂಗ್ಲಾದೇಶ್
- ನ್ಯೂಝಿಲೆಂಡ್
- ಗ್ರೂಪ್-B
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ಸೌತ್ ಆಫ್ರಿಕಾ
- ಅಫ್ಘಾನಿಸ್ತಾನ್.