ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಮಹಾ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಟಿ20 ವಿಶ್ವಕಪ್ ಆರಂಭವಾಗುವುದೇ ಭಾರತ- ಪಾಕ್ (India-Pakistan) ಪಂದ್ಯದೊಂದಿಗೆ. ಮೆಲ್ಬೋರ್ನ್ ಮೈದಾನದಲ್ಲಿ ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ತಯಾರಿ ನಡೆಸಿದ್ದು, ತಮ್ಮ ಎದುರಾಳಿಯ ಸ್ಟ್ರೆಂತ್ ಹಾಗೂ ವೀಕ್ನೆಸ್ ಹುಡುಕಾಟದಲ್ಲಿ ನಿರತವಾಗಿವೆ. ಅಲ್ಲದೆ ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತೆ ಕಾಯುತ್ತಿದ್ದು, ಪಂದ್ಯದ ಟಿಕೆಟ್ಗಳು ಸಹ ಮಾರಾಟವಾಗಿವೆ. ಆದರೆ ಎಲ್ಲಾ ನಿರೀಕ್ಷೆಗಳಿಗೆ ಶಾಕ್ ನೀಡುವಂತಹ ಸುದ್ದಿಯೊಂದು ಮೆಲ್ಬೋರ್ನ್ನಿಂದ ಹೊರಬಿದ್ದಿದೆ.
ವಾಸ್ತವವಾಗಿ, 2022 ರ ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ರೋಚಕತೆಗೆ ಮೆಲ್ಬೋರ್ನ್‌ನ ಹವಾಮಾನ ತಣ್ಣೀರು ಎರಚಿದೆ. ಅಂದು ಮೆಲ್ಬೋರ್ನ್ನಲ್ಲಿ ಮಳೆಯಾಗುವ ಸಂಭವವಿದ್ದು, ಮಳೆಯಿಂದ ಪಂದ್ಯಕ್ಕೆ ಹಿನ್ನಡೆಯಾಗುವ ಆತಂಕವಿದೆ. ಅಂದು ಮೆಲ್ಬೋರ್ನ್ನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಪಂದ್ಯದ ಹಿಂದಿನ ದಿನವೂ ಸಹ ಅಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಮುನ್ಸೂಚನೆ ಏಜೆನ್ಸಿ ಪ್ರಕಾರ, ಅಕ್ಟೋಬರ್ 20 ರಿಂದ ಆಸ್ಟ್ರೇಲಿಯಾದ 3 ರಾಜ್ಯಗಳಲ್ಲಿ ಮಳೆಯಾಗಲಿದೆ. ಹಾಗೆಯೇ ಈ 3 ದಿನಗಳು ಮೆಲ್ಬೋರ್ನ್ನಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ವರದಿಯಾಗಿದೆ.
ಹವಾಮಾನ ಮಾಹಿತಿ ವೆಬ್‌ಸೈಟ್ ಅಕ್ಯುವೆದರ್ ಪ್ರಕಾರ, ಅಕ್ಟೋಬರ್ 23 ರ ಬೆಳಿಗ್ಗೆ ಮೆಲ್ಬೋರ್ನ್‌ನಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಆ ಇಡೀ ದಿನ ಮೆಲ್ಬೋರ್ನ್ನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಹಾಗೆಯೇ ಅಕ್ಟೋಬರ್ 22 ರಂದು ಸಹ ಮಧ್ಯಾಹ್ನದ ನಂತರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೇ ದಿನವಿಡೀ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್‌ನಲ್ಲಿ ಇದುವರೆಗೂ ಸೃಷ್ಟಿಯಾಗಿರುವ ಪ್ರಮುಖ 10 ದಾಖಲೆಗಳಿವು..
ಅಭಿಮಾನಿಗಳ ಕನಸು ಭಗ್ನ?
ಪಂದ್ಯ ಆರಂಭಕ್ಕೆ 24 ಗಂಟೆಗಳ ಮೊದಲು ಮೆಲ್ಬೋರ್ನ್‌ನಲ್ಲಿ ಹವಾಮಾನ ವೈಪರೀತ್ಯ ಉಂಟಾಗುವುದು ಸ್ಪಷ್ಟವಾಗಿದೆ. ಹೀಗಾಗಿ ಪಂದ್ಯದ ವೇಳೆ ಇಂತಹದ್ದೇನೂ ಆಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ.
ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ವಿಶ್ವಕಪ್ಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ , ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sun, 16 October 22