T20 World Cup: ಟಿ20 ವಿಶ್ವಕಪ್‌ನಲ್ಲಿ ಇದುವರೆಗೂ ಸೃಷ್ಟಿಯಾಗಿರುವ ಪ್ರಮುಖ 10 ದಾಖಲೆಗಳಿವು..
T20 World Cup: ಎಂಟನೇ ಆವೃತ್ತಿಯ ಟಿ20 ವಿಶ್ವಕಪ್ ಇಂದಿನಿಂದ (ಅಕ್ಟೋಬರ್ 16) ಆರಂಭವಾಗುತ್ತಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ತಂಡ ಮುಖಾಮುಖಿಯಾಗುತ್ತಿವೆ.
ಎಂಟನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup) ಇಂದಿನಿಂದ (ಅಕ್ಟೋಬರ್ 16) ಆರಂಭವಾಗುತ್ತಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ದಸುನ್ ಶನಕಾ (Dasun Shanaka) ನಾಯಕತ್ವದ ಶ್ರೀಲಂಕಾ ಹಾಗೂ ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ ತಂಡ (Sri Lanka vs Namibia) ಮುಖಾಮುಖಿ ಆಗಲಿದೆ. ಗೀಲಾಂಗ್ನ ಸೈಮಂಡ್ಸ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಇದುವರೆಗೆ ನಡೆದ ಏಳು ಟಿ20 ವಿಶ್ವಕಪ್‌ಗಳಲ್ಲಿ ಎರಡು ಬಾರಿ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ದಾಖಲೆ ಬರೆದಿದೆ. ಇದಲ್ಲದೆ, ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಈ ಟ್ರೋಫಿಯನ್ನು ಒಮ್ಮೆ ಗೆದ್ದಿವೆ. ಈಗ 2007 ರಿಂದ 2021 ರವರೆಗಿನ ಈ ಏಳು T20 ವಿಶ್ವಕಪ್‌ಗಳಲ್ಲಿ ಸೃಷ್ಟಿಯಾಗಿರುವ ಪ್ರಮುಖ 10 ದೊಡ್ಡ ದಾಖಲೆಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
- ಅತಿ ಹೆಚ್ಚು ರನ್: ಶ್ರೀಲಂಕಾದ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 31 ಪಂದ್ಯಗಳಲ್ಲಿ ಒಟ್ಟು 1016 ರನ್ ಗಳಿಸಿದ್ದಾರೆ.
- ಅತಿ ಹೆಚ್ಚು ಶತಕ: ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನಲ್ಲಿ ಎರಡು ಶತಕಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ. ಇವರಲ್ಲದೆ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ತಲಾ ಒಂದೊಂದು ಶತಕ ಬಾರಿಸಿದ್ದಾರೆ.
- ಅತ್ಯುತ್ತಮ ಸ್ಕೋರ್: 2012 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಬ್ರೆಂಡನ್ ಮೆಕಲಮ್ 123 ರನ್ ಬಾರಿಸುವ ಮೂಲಕ ಟಿ20 ವಿಶ್ವಕಪ್ನ ಒಂದು ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
- ಅತಿ ಹೆಚ್ಚು 50+ ರನ್ ಇನ್ನಿಂಗ್ಸ್: ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು 21 ಪಂದ್ಯಗಳಲ್ಲಿ 10 ಬಾರಿ 50+ ಇನ್ನಿಂಗ್ಸ್ ಆಡಿದ್ದಾರೆ.
- ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್: ಈ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2014ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ 319 ರನ್ ಗಳಿಸಿ ಈ ದಾಖಲೆ ಬರೆದಿದ್ದರು.
- ಹೆಚ್ಚು ಸಿಕ್ಸರ್‌ಗಳು: ಕ್ರಿಸ್ ಗೇಲ್ ಹೆಸರಿನಲ್ಲಿ ಈ ದಾಖಲೆ ಇದ್ದು, ಗೇಲ್ 33 ಪಂದ್ಯಗಳಲ್ಲಿ 63 ಸಿಕ್ಸರ್ ಬಾರಿಸಿದ್ದರು.
- ಹೆಚ್ಚು ವಿಕೆಟ್: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 31 ಪಂದ್ಯಗಳಲ್ಲಿ 41 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್: ಈ ದಾಖಲೆ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾ ಹೆಸರಿನಲ್ಲಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ಹಸರಂಗ ಒಟ್ಟು 16 ವಿಕೆಟ್‌ಗಳನ್ನು ಉರುಳಿಸಿದ್ದರು.
- ಅತಿ ಹೆಚ್ಚು ಕ್ಯಾಚ್‌ಗಳು: ಎಬಿ ಡಿವಿಲಿಯರ್ಸ್ 30 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 23 ಕ್ಯಾಚ್‌ಗಳನ್ನು ಹಿಡಿದು, ಈ ದಾಖಲೆಯನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದಾರೆ.
- ಹೆಚ್ಚು ವಿಕೆಟ್ ಉರುಳಿಸಿದ ಕೀಪರ್: ಎಂಎಸ್ ಧೋನಿ ಹೆಸರಿನಲ್ಲಿ ಈ ದಾಖಲೆ ಸೃಷ್ಟಿಯಾಗಿದ್ದು, ಧೋನಿ ಟಿ20 ವಿಶ್ವಕಪ್‌ನಲ್ಲಿ 33 ಪಂದ್ಯಗಳಲ್ಲಿ ಒಟ್ಟು 32 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published On - 10:26 am, Sun, 16 October 22