U19 World cup: ದಾಖಲೆ ಬರೆದ ರಾಜ್ ಬಾವಾ: ಭಾರತಕ್ಕೆ 326 ರನ್ಗಳ ಗೆಲುವು, ಕಲೆಹಾಕಿದ ರನ್ ಎಷ್ಟು ಗೊತ್ತೇ?
Raj Bawa, India U19 vs Uganda U19: ಶನಿವಾರ ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ ಬರೋಬ್ಬರಿ 326 ರನ್ಗಳ ದಾಖಲೆಯ ಗೆಲುವು ಕಂಡಿತು. ಅಜೇಯ 162 ರನ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ ರಾಜ್ ಬಾವಾ ಉಗಾಂಡ ಬೌಲರ್ಗಳನ್ನು ಧೂಳೀಪಟ ಮಾಡಿದರು.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ – 19 ವಿಶ್ವಕಪ್ನಲ್ಲಿ (ICC U19 World cup) ಭಾರತದ ಕಿರಿಯ ಆಟಗಾರರು ಧೂಳೆಬ್ಬಿಸುತ್ತಿದ್ದಾರೆ. ಶನಿವಾರ ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ತಂಡ (India U19 vs Uganda U19) ಬರೋಬ್ಬರಿ 326 ರನ್ಗಳ ದಾಖಲೆಯ ಗೆಲುವು ಕಂಡಿತು. ಅಜೇಯ 162 ರನ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ ರಾಜ್ ಬಾವಾ (Raj Bawa) ಉಗಾಂಡ ಬೌಲರ್ಗಳನ್ನು ಧೂಳೀಪಟ ಮಾಡಿದರು. ರಾಜ್ ಅವರು ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್ ದಾಖಲೆಯನ್ನು ಕೂಡ ಮುರಿದು ಹಾಕಿದ್ದಾರೆ. ರಘವಂಶಿ 144 ರನ್ ಚಚ್ಚಿದರು. ಈ ಬಾರಿಯ ಅಂಡರ್-19 ವಿಶ್ವಕಪ್ನಲ್ಲಿ ಭಾರತ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಸೂಪರ್ ಲೀಗ್ ಕ್ವಾರ್ಟರ್ ಫೈನಲ್ -2 ನಲ್ಲಿ ಭಾರತ ತಂಡ ಬಾಂಗ್ಲಾದೇಶ ಅಂಡರ್-19 ತಂಡವನ್ನು ಎದುರಿಸಲಿದೆ. ಕೊರೊನಾ ಕಾರಣದಿಂದ ಐಸೋಲೇಶನ್ನಲ್ಲಿರುವ ನಾಯಕ ಯಶ್ ಧುಲ್ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಬೊಂಬಾಟ್ ಪ್ರದರ್ಶನ ನೀಡುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಬೇಗನೆ 15 ರನ್ ಗಳಿಸಿದ್ದ ಹರ್ನೂರ್ ಸಿಂಗ್ ಹಾಗೂ ನಾಯಕ ನಿಶಾಂತ್ ಸಿಂಧೂ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಮೂರನೇ ವಿಕೆಟ್ಗೆ ಜೊತೆಯಾದ ರಘುವಂಶಿ ಹಾಗೂ ರಾಜ್ ಬಾವಾ ಅಮೋಘ ಆಟವಾಡಿದರು. ಉಗಾಂಡ ಬೌಲರ್ಗಳ ಮೈಚಳಿ ಬಿಡಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಈ ಜೋಡಿ ದ್ವಿಶತಕದ ಜೊತೆಯಾಟ ಆಡಿತು. ರಘುವಂಶಿ 120 ಎಸೆತಗಳಲ್ಲಿ 22 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 144 ರನ್ಗೆ ಔಟಾದರು.
ನಂತರ ಮನಬಂದಂತೆ ಬ್ಯಾಟ್ ಬೀಸಿದ ರಾಜ್ ತಂಡದ ರನ್ ಗತಿಯನ್ನ ಮತ್ತಷ್ಟು ಏರಿಸಿದರು. ಇವರು ಕೇವಲ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿ ಅಜೇಯ 162 ರನ್ ಚಚ್ಚಿದರು. ಪರಿಣಾಮ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 405 ರನ್ ಕಲೆಹಾಕಿತು.
406 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಉಗಾಂಡ ಈ ಮೊತ್ತದ ಹತ್ತಿರ ಕೂಡ ಸಮೀಪಿಸಲಿಲ್ಲ. ತಂಡದ ಮೊತ್ತ 100ರ ಗಡಿ ಕೂಡ ದಾಟಲಿಲ್ಲ. ಭಾರತೀಯ ಬೌಲಿಂಗ್ ದಾಳಿಗೆ ನೆಲಕಚ್ಚಿದ ಉಗಾಂಡ ಬ್ಯಾಟರ್ಗಳು 19.4 ಓವರ್ನಲ್ಲಿ ಕೇವಲ 79 ರನ್ಗೆ ಆಲೌಟ್ ಆಯಿತು. ಭಾರತ ಪರ ನಾಯಕ ನಿಶಾಂತ್ 4 ವಿಕೆಟ್ ಕಿತ್ತರೆ, ರಾಜ್ವರ್ಧನ್ 2, ವಾಸು ಮತ್ತು ವಿಕ್ಕಿ ತಲಾ 1 ವಿಕೆಟ್ ಪಡೆದರು.
ಧವನ್ ದಾಖಲೆ ರಾಜಾ ಉಡೀಸ್:
ಉಗಾಂಡಾ ವಿರುದ್ಧ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಜಾ ಬಾವಾ ವಿಶೇಷ ದಾಖಲೆ ಬರೆದಿದ್ದಾರೆ. ಪ್ರಸ್ತುತ ವಿಶ್ವಕಪ್ನಲ್ಲಿ ಅಜೇಯ 162ರನ್ ಗಳಿಕೆ ಮಾಡಿರುವ ಬಾವಾ ವಿಶ್ವಕಪ್ ಇತಿಹಾಸದಲ್ಲೇ ವೇಗವಾಗಿ 150ರನ್ ಗಳಿಕೆ ಮಾಡಿರುವ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಈ ಹಿಂದೆ 2004 ರಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಶಿಖರ್ ಧವನ್ ಸಿಡಿಸಿದ್ದ ಅಜೇಯ 155 ರನ್ಗಳ ದಾಖಲೆ ಬ್ರೇಕ್ ಮಾಡಿದರು.
South Africa vs India: ಇಂದು ಅಂತಿಮ ಏಕದಿನ: ಮೂರನೇ ಪಂದ್ಯ ಗೆದ್ದು ವೈಟ್ವಾಷ್ನಿಂದ ಪಾರಾಗುವತ್ತ ಭಾರತ ಚಿತ್ತ