
2025 ರ ರಣಜಿ ಟ್ರೋಫಿಯಲ್ಲಿ (Ranji Trophy 2025) ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ರಜತ್ ಪಾಟಿದರ್ ( Rajat Patidar) ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಣಜಿಯಲ್ಲಿ ಮಧ್ಯಪ್ರದೇಶ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ರಜತ್, ತಮ್ಮ ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ದ್ವಿಶತಕದ ಇನ್ನಿಂಗ್ಸ್‌ನಲ್ಲಿ 332 ಎಸೆತಗಳನ್ನು ಎದುರಿಸಿರುವ ರಜತ್ 26 ಬೌಂಡರಿಗಳ ಸಹಿತ ಅಜೇಯ 205 ರನ್ ಕಲೆಹಾಕಿದ್ದಾರೆ. ನಾಯಕನ ಈ ದ್ವಿಶತಕದ ಇನ್ನಿಂಗ್ಸ್ನಿಂದಾಗಿ ಮಧ್ಯಪ್ರದೇಶ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 519 ರನ್ ಕಲೆಹಾಕಿದೆ.
ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದ ಎರಡನೇ ದಿನದಂತ್ಯಕ್ಕೆ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ರಜತ್, ಪಂದ್ಯದ ಮೂರನೇ ದಿನದಂದು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ ಮೊದಲ ದ್ವಿಶತಕವನ್ನು ಪೂರ್ಣಗೊಳಿಸಿದರು. ಪಾಟಿದಾರ್ ಅವರ ಈ ಇನ್ನಿಂಗ್ಸ್ನ ವಿಶೇಷತೆಯೆಂದರೆ ಟೈಲೆಂಡರ್‌ಗಳ ಜೊತೆ ಉತ್ತಮ ಜೊತೆಯಾಟ ಕಟ್ಟುವ ಮೂಲಕ ರಜತ್ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದರು.
ವಾಸ್ತವವಾಗಿ ರಜತ್ ಪಾಟಿದರ್ಗೆ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿತು. ಆದರೆ ಆ ಪಂದ್ಯದಲ್ಲಿ ರಜತ್‌ಗೆ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆ ಪಂದ್ಯದ ನಂತರ ರಜತ್ ಪಾಟಿದಾರ್ ಅವರನ್ನು ಭಾರತೀಯ ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಆದರೆ ಕಳೆದ ರಣಜಿ ಟ್ರೋಫಿ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾಟಿದಾರ್ ಮಧ್ಯಪ್ರದೇಶದ ಪರ ಪ್ರಮುಖ ರನ್ ಸ್ಕೋರರ್ ಆಗಿದ್ದರು, ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 48.09 ಸರಾಸರಿಯಲ್ಲಿ 529 ರನ್ ಗಳಿಸಿದರು. ಹಾಗೆಯೇ ತಮ್ಮ ನಾಯಕತ್ವದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶವನ್ನು ಫೈನಲ್‌ಗೂ ಕರೆದೊಯ್ದರು.
ರಣಜಿಯಲ್ಲಿ ರಜತ್ ಪಾಟಿದರ್ ಶತಕ; ಮೊದಲ ಪಂದ್ಯದಲ್ಲೇ ಮಿಂಚಿದ ಆರ್ಸಿಬಿ ನಾಯಕ
ಪಾಟಿದಾರ್ ನಾಯಕತ್ವದಲ್ಲಿ ಆರ್ಸಿಬಿ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಾಗೆಯೇ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ 2025 ಟೂರ್ನಮೆಂಟ್‌ನಲ್ಲಿ ಸೆಂಟ್ರಲ್ ಜೋನ್‌ನ ನಾಯಕತ್ವ ವಹಿಸಿಕೊಂಡ ಪಾಟಿದಾರ್, ಕ್ವಾರ್ಟರ್-ಫೈನಲ್ ಮತ್ತು ಫೈನಲ್‌ನಲ್ಲಿ ಎರಡು ಶತಕಗಳು ಸೇರಿದಂತೆ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದರು. ದಕ್ಷಿಣ ವಲಯ ವಿರುದ್ಧದ ಫೈನಲ್‌ನಲ್ಲಿ, ಪಾಟಿದಾರ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರು, ಇದು 10 ವರ್ಷಗಳ ನಂತರ ಸೆಂಟ್ರಲ್ ಜೋನ್ ದುಲೀಪ್ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿತು.
ರಜತ್ ಪಾಟಿದಾರ್ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಅವರಿಗೆ ಭಾರತ ಎ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ದ್ವಿಶತಕದ ನಂತರ, ಬಿಸಿಸಿಐ ಆಯ್ಕೆದಾರರು ದಕ್ಷಿಣ ಆಫ್ರಿಕಾ ಎ ವಿರುದ್ಧದ ಮುಂಬರುವ ಸರಣಿಯಲ್ಲಿ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 17 October 25