- Kannada News Photo gallery Cricket photos Rajat Patidar Century: MP Captain Slams Ton in Ranji Trophy 2025-26 Opener
ರಣಜಿಯಲ್ಲಿ ರಜತ್ ಪಾಟಿದರ್ ಶತಕ; ಮೊದಲ ಪಂದ್ಯದಲ್ಲೇ ಮಿಂಚಿದ ಆರ್ಸಿಬಿ ನಾಯಕ
Rajat Patidar century: ರಜತ್ ಪಟಿದಾರ್ ತಮ್ಮ ನಾಯಕತ್ವದಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸುತ್ತಾ ರಣಜಿ ಟ್ರೋಫಿ 2025ರ ಮೊದಲ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. 107 ರನ್ ಗಳಿಸಿ ಅಜೇಯರಾಗಿ ಉಳಿದ ಪಟಿದಾರ್, ವೆಂಕಟೇಶ್ ಅಯ್ಯರ್ ಜೊತೆಗೂಡಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅವರ ಸ್ಥಿರ ಪ್ರದರ್ಶನ ಮುಂದುವರಿದಿದ್ದು, ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ನಿರೀಕ್ಷಿಸಲಾಗಿದೆ.
Updated on: Oct 16, 2025 | 6:59 PM

ತಮ್ಮ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡಿದ್ದ ರಜತ್ ಪಟಿದಾರ್ ಇದೀಗ ದೇಶೀ ಟೂರ್ನಿಯಲ್ಲೂ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. 2025-26ರ ರಣಜಿ ಟ್ರೋಫಿಯ ಮೊದಲ ಸುತ್ತಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಧ್ಯಪ್ರದೇಶ ಪರ ಕಣಕ್ಕಿಳಿದಿರುವ ರಜತ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಇಂದೋರ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವ ಹೊತ್ತಿರುವ ರಜತ್ ಪಟಿದಾರ್ ಅಮೋಘ ಶತಕ ಬಾರಿಸಿ ತಂಡವನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದಿದ್ದಾರೆ. ವಿಶೇಷವೆಂದರೆ ಮಧ್ಯಪ್ರದೇಶದ ಹೊಸ ಆಲ್-ಫಾರ್ಮ್ಯಾಟ್ ನಾಯಕನಾಗಿ ರಜತ್ ಪಟಿದಾರ್ ತಮ್ಮ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್‌ನ 232 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಮಧ್ಯಪ್ರದೇಶ ನಾಲ್ಕು ವಿಕೆಟ್‌ಗಳಿಗೆ 155 ರನ್ ಗಳಿಸಿತ್ತು. ಇಲ್ಲಿಂದ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಪಾಟಿದಾರ್ 160 ಎಸೆತಗಳಲ್ಲಿ 100 ರನ್‌ಗಳ ಗಡಿ ತಲುಪಿದರು.

ಶತಕ ಬಾರಿಸಿದ ಬಳಿಕವೂ ತಮ್ಮ ಆಟವನ್ನು ಮುಂದುವರೆಸಿರುವ ರಜತ್ ಪಾಟಿದರ್ ಎರಡನೇ ದಿನದಾಟದಂತ್ಯಕ್ಕೆ 185 ಎಸೆತಗಳಲ್ಲಿ 107 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ರಜತ್ ಪಾಟಿದಾರ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಸಹ ಸೇರಿದ್ದು, ಮಧ್ಯಪ್ರದೇಶ ಆರು ವಿಕೆಟ್‌ಗಳಿಗೆ 305 ರನ್ ಕಲೆಹಾಕಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ರಜತ್ ಪಾಟಿದಾರ್ ತಮ್ಮ ಕೊನೆಯ ಎಂಟು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ 100 ರನ್‌ಗಳ ಗಡಿ ದಾಟಿದ್ದಾರೆ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಪಾಟಿದಾರ್ ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಮಧ್ಯಪ್ರದೇಶದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು, ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 48.09 ಸರಾಸರಿಯಲ್ಲಿ 529 ರನ್ ಗಳಿಸಿದ್ದರು.

ಈ ಪಂದ್ಯದಲ್ಲಿ ಮಧ್ಯಪ್ರದೇಶದ ಪರ ವೆಂಕಟೇಶ್ ಅಯ್ಯರ್ ಕೂಡ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಅಯ್ಯರ್ 114 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 73 ರನ್ ಗಳಿಸಿದರು. ರಜತ್ ಪಾಟಿದಾರ್ ಅವರೊಂದಿಗೆ 147 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಜೊತೆಯಾಟ ತಂಡವನ್ನು 300 ರನ್‌ಗಳ ಗಡಿ ದಾಟಿಸಿತು.
