
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ಕರ್ನಾಟಕ ಹಾಗೂ ಸೌರಾಷ್ಟ್ರ (Karnataka vs Saurashtra) ನಡುವಿನ ರಣಜಿ ಟ್ರೋಫಿ (Ranji Trophy) ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಕರ್ನಾಟಕ ತಂಡ ಮೊದಲ ದಿನದಾಟದಂತ್ತಕ್ಕೆ 5 ವಿಕೆಟ್ ಕಳೆದುಕೊಂಡು 295 ರನ್ ಕಲೆಹಾಕಿದೆ. ತಂಡದ ಪರ ಮೂವರು ಅರ್ಧಶತಕ ಸಿಡಿಸಿದ್ದು, ದೇವದತ್ ಪಡಿಕ್ಕಲ್ (Devdutt Padikkal) ಕೇವಲ 4 ರನ್ಗಳಿಂದ ಶತಕ ವಂಚಿತರಾದರೆ, ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಇದರಲ್ಲಿ ಕರುಣ್ 73 ರನ್ ಬಾರಿಸಿ ಔಟಾದರೆ, ಸ್ಮರಣ್ 66 ರನ್ ಬಾರಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿಧಾನಗತಿಯ ಬ್ಯಾಟಿಂಗ್ಗೆ ಮುಂದಾದ ನಿಖಿನ್ ಜೋಶ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ 13 ರನ್ಗಳಿಗೆ ಬೇರ್ಪಟ್ಟರು. ನಾಯಕ ಮಯಾಂಕ್ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿಖಿನ್ 12 ರನ್ಗಳಿಗೆ ಸುಸ್ತಾದರು. ಆದರೆ ಆ ಬಳಿಕ ಒಂದಾದ ಅನುಭವಿ ಕರುಣ್ ನಾಯರ್ ಹಾಗೂ ಪಡಿಕ್ಕಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಇಬ್ಬರು ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನಾಡಿದರು. ಈ ವೇಳೆ ಕರುಣ್ ನಾಯರ್ 9 ಬೌಂಡರಿ ಸಹಿತ 73 ರನ್ ಬಾರಿಸಿ ಔಟಾದರೆ, ದೇವದತ್ ಪಡಿಕ್ಕಲ್ ಶತಕದಂಚಿನಲ್ಲಿ ಎಡವಿ 96 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಅವರ ಇನ್ನಿಂಗ್ಸ್ನಲ್ಲಿ 11 ಬೌಂಡರಿಗಳು ಸೇರಿದ್ದವು. ಇವರಿಬ್ಬರು ಒಟ್ಟಾಗಿ ತಂಡವನ್ನು 172 ರನ್ಗಳಿಗೆ ಕೊಂಡೊಯ್ದರು. ಈ ಜೋಡಿಯ ಬಳಿಕ ಬಂದ ಸ್ಮರಣ್ಗೆ ಶ್ರೀಜಿತ್ರಿಂದ ಬೆಂಬಲ ಸಿಗಲಿಲ್ಲ. ಶ್ರೀಜಿತ್ 5 ರನ್ ಬಾರಿಸಿ ಔಟಾದರು. ಆ ಬಳಿಕ ಬಂದ ಶ್ರೇಯಸ್ ಗೋಪಾಲ್, ಸ್ಮರಣ್ಗೆ ಉತ್ತಮ ಸಾಥ್ ನೀಡಿದರು.
Vaibhav Suryavanshi: 14ನೇ ವಯಸ್ಸಿಗೆ ರಣಜಿ ತಂಡದ ಉಪನಾಯಕನಾದ ವೈಭವ್ ಸೂರ್ಯವಂಶಿ
ಇವರಿಬ್ಬರು ಒಟ್ಟಾಗಿ ತಂಡವನ್ನು 200 ರನ್ಗಳ ಗಡಿ ದಾಟಿಸಿದಲ್ಲದೆ, ದಿನದಾಟದ ಅಂತ್ಯದ ವೇಳೆಗೆ ಅಜೇಯರಾಗಿ ಉಳಿದು ತಂಡವನ್ನು 295 ರನ್ಗಳಿಗೆ ಕೊಂಡೊಯ್ದರು. ಈ ವೇಳೆ ಸ್ಮರಣ್ ಅಜೇಯ 66 ರನ್ ಬಾರಿಸಿದರೆ, ಶ್ರೇಯಸ್ ಗೋಪಾಲ್ 38 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಇತ್ತ ಸೌರಾಷ್ಟ್ರ ಪರ ಬೌಲಿಂಗ್ನಲ್ಲಿ ಮಿಂಚಿದ ಧರ್ಮೇಂದ್ರಸಿಂಹ ಜಡೇಜಾ ಅತ್ಯಧಿಕ 4 ವಿಕೆಟ್ ಕಬಳಿಸಿದರೆ, ಯುವರಾಜ್‌ಸಿಂಹ ದೋಡಿಯಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Wed, 15 October 25