IND vs AUS: RO-KO ಕೊನೆಯ ಆಸ್ಟ್ರೇಲಿಯಾ ಪ್ರವಾಸ; ಖಚಿತಪಡಿಸಿದ ಆಸೀಸ್ ನಾಯಕ
India vs Australia ODI: ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಭಾರತ vs ಆಸ್ಟ್ರೇಲಿಯಾ ODI ಸರಣಿಗಾಗಿ ಟೀಂ ಇಂಡಿಯಾ ಆಸೀಸ್‌ಗೆ ಹಾರಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿ ತಂಡ ಸೇರಿದ್ದು, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರಕಾರ, ಅಭಿಮಾನಿಗಳಿಗೆ ಇವರನ್ನು ಆಸ್ಟ್ರೇಲಿಯಾ ನೆಲದಲ್ಲಿ ನೋಡಲು ಇದು ಕೊನೆಯ ಅವಕಾಶವಾಗಿರಬಹುದು. ಕಮ್ಮಿನ್ಸ್ ಗಾಯದಿಂದ ಸರಣಿ ತಪ್ಪಿಸಿಕೊಂಡಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಟೀಂ ಇಂಡಿಯಾ (India vs Australia) ಇಂದು ಆಸ್ಟ್ರೇಲಿಯಾಕ್ಕೆ ಹಾರಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾದಿಂದ ಕಣ್ಮರೆಯಾಗಿದ್ದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಮತ್ತೆ ತಂಡವನ್ನು ಕೂಡಿಕೊಂಡಿದ್ದು, ಒಟ್ಟಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಟೀಂ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ರೋಹಿತ್ ಹಾಗೂ ಕೊಹ್ಲಿಗೆ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸ ಆಗುವುದು ಖಚಿತವಾಗಿದೆ. ಏಕೆಂದರೆ ಈ ಪ್ರವಾಸದ ಬಳಿಕ ಏಕದಿನ ವಿಶ್ವಕಪ್ವರೆಗೂ ಭಾರತ ತಂಡ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡುವುದಿಲ್ಲ. ಅಲ್ಲದೆ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ, ರೋಹಿತ್ ಆಡುವುದನ್ನು ಮುಂದುವರೆಸುತ್ತಾರೆ ಎನ್ನುವುದು ಅಸಾಧ್ಯದ ಮಾತು. ಹೀಗಾಗಿ ಇವರಿಬ್ಬರಿಗೆ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಿದ್ದು, ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಇದನ್ನೇ ಹೇಳಿದ್ದಾರೆ.
ಕೊನೆಯ ಅವಕಾಶವಾಗಿರಬಹುದು
ಸರಣಿ ಆರಂಭಕ್ಕೂ ಮುನ್ನ ಈ ಇಬ್ಬರು ಆಟಗಾರರಿಗೆ ಭವ್ಯ ಸ್ವಾಗತ ಕೋರಿರುವ , ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್, ಆ ಒಂದು ಕಾರಣಕ್ಕಾಗಿ ನಿರಾಶೆಗೊಂಡಿದ್ದಾರೆ. ಭಾನುವಾರ ಪರ್ತ್‌ನಲ್ಲಿ ಪ್ರಾರಂಭವಾಗುವ ಏಕದಿನ ಸರಣಿ ವಿಶೇಷವಾಗಿದೆ ಏಕೆಂದರೆ ಇದು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಸೂಪರ್‌ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ನೋಡಲು ಕೊನೆಯ ಅವಕಾಶವಾಗಿರಬಹುದು ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ. ವಿರಾಟ್ ಮತ್ತು ರೋಹಿತ್ ಕಳೆದ 15 ವರ್ಷಗಳಿಂದ ಪ್ರತಿ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲೂ ತಂಡದೊಂದಿಗೆ ಇದ್ದಾರೆ. ಆದ್ದರಿಂದ ಆಸ್ಟ್ರೇಲಿಯಾದ ಸಾರ್ವಜನಿಕರು ಆಸ್ಟ್ರೇಲಿಯಾ ನೆಲದಲ್ಲಿ ಇವರಿಬ್ಬರು ಆಡುವುದನ್ನು ನೋಡಲು ಇದು ಕೊನೆಯ ಅವಕಾಶವಾಗಿರಬಹುದು ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ
ಕಮ್ಮಿನ್ಸ್ ನಿರಾಶೆಗೊಂಡಿದ್ಯಾಕೆ?
ವಾಸ್ತವವಾಗಿ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ‘ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನು ತಪ್ಪಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ. ಭಾರಿ ಜನಸಂದಣಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಸಾಕಷ್ಟು ಉತ್ಸಾಹವಿದೆ. ಆದ್ದರಿಂದ, ನೀವು ಪಂದ್ಯವನ್ನು ತಪ್ಪಿಸಿಕೊಂಡಾಗಲೆಲ್ಲಾ ಅದು ನಿರಾಶಾದಾಯಕವಾಗಿರುತ್ತದೆ. ಆದರೆ ಇಂತಹ ದೊಡ್ಡ ಸರಣಿಯನ್ನು ಕಳೆದುಕೊಳ್ಳುವುದು ಯಾವಾಗಲೂ ಸ್ವಲ್ಪ ಕಠಿಣವಾಗಿರುತ್ತದೆ ಎಂದಿದ್ದಾರೆ.
ಆಸೀಸ್ ನಾಯಕನ ಏಕದಿನ ತಂಡದಲ್ಲಿ ಮೂವರು ಭಾರತೀಯರಿಗೆ ಸ್ಥಾನ; ವಿಡಿಯೋ ನೋಡಿ
ಮಿಚೆಲ್ ಮಾರ್ಷ್‌ಗೆ ಕಮ್ಮಿನ್ಸ್ ಸಲಹೆ
ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಮಾರ್ಷ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಮಾರ್ಷ್‌ಗೆ ಸಲಹೆ ನೀಡಿರುವ ಕಮ್ಮಿನ್ಸ್, ‘ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲ್ಲಲು ಖಂಡಿತವಾಗಿಯೂ ಬಯಸುತ್ತದೆ. ಆದರೆ ನಾವು ಯುವ ಆಟಗಾರರಿಗೆ, ವಿಶೇಷವಾಗಿ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಆಡದವರಿಗೆ ಅವಕಾಶಗಳನ್ನು ನೀಡಬೇಕಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ. ಅವರನ್ನು ಆಡಿಸುವುದು ಮತ್ತು ಅವರು ಏನು ಮಾಡಬಹುದು ಎಂಬುದನ್ನು ನೋಡುವುದು ಗುರಿಯಾಗಿದೆ. 2027 ರ ವಿಶ್ವಕಪ್ ವೇಳೆಗೆ, ನಮ್ಮ 15 ಆಟಗಾರರಲ್ಲಿ ಯಾರು ಆ ಪಂದ್ಯಾವಳಿಯಲ್ಲಿ ಆಡುತ್ತಾರೆಂದು ನಮಗೆ ತಿಳಿದಿರಬೇಕು’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Wed, 15 October 25
