Ranji Trophy 2022-23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಬೃಹತ್ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಯುವ ವೇಗಿ ವೆಂಕಟೇಶ್ ದಾಳಿಗೆ ತತ್ತರಿಸಿತು. ಕರಾರುವಾಕ್ ಬೌಲಿಂಗ್ ನಡೆಸಿದ್ದ ಎಂ. ವೆಂಕಟೇಶ್ 36 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಉತ್ತರಾಖಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 116 ರನ್ಗಳಿಗೆ ಆಲೌಟ್ ಆಗಿತ್ತು.
ಆ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ (83) ಹಾಗೂ ರವಿಕುಮಾರ್ ಸಮರ್ಥ್ (82) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ 69 ರನ್ಗಳ ಅಮೂಲ್ಯ ಕೊಡುಗೆ ನೀಡಿದರು. ಇನ್ನು ನಿಕಿನ್ ಜೋಸ್ 62 ರನ್ ಬಾರಿಸಿದರು. ಪರಿಣಾಮ ಕರ್ನಾಟಕ ತಂಡದ ಮೊತ್ತವು 3 ವಿಕೆಟ್ ನಷ್ಟಕ್ಕೆ 300 ರ ಗಡಿದಾಟಿತು.
ಈ ನಾಲ್ಕು ಅರ್ಧಶತಕಗಳ ಬಳಿಕ ಮನೀಷ್ ಪಾಂಡೆ 39 ರನ್ ಬಾರಿಸಿ ಔಟಾದರೆ, ಶ್ರೇಯಸ್ ಗೋಪಾಲ್ ಅತ್ಯಾದ್ಭುತ ಇನಿಂಗ್ಸ್ ಆಡಿದರು. ಉತ್ತರಾಖಂಡ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಶ್ರೇಯಸ್ ಭರ್ಜರಿ ಶತಕ ಸಿಡಿಸಿದರು.
ಅಷ್ಟೇ ಅಲ್ಲದೆ ಕೆಳಕ್ರಮಾಂಕದ ಆಟಗಾರರ ಜೊತೆಗೂಡಿ ರನ್ ಕಲೆಹಾಕುತ್ತಾ ಸಾಗಿದರು. ಶ್ರೇಯಸ್ ಗೋಪಾಲ್ ಅವರ ಈ ಅತ್ಯುತ್ತಮ ಆಟದ ಫಲವಾಗಿ ಕರ್ನಾಟಕ ತಂಡದ ಸ್ಕೋರ್ 600 ರನ್ಗಳನ್ನು ದಾಟಿತು.
ಇದನ್ನೂ ಓದಿ: Shubman Gill: 1 ಶತಕದೊಂದಿಗೆ 10 ದಾಖಲೆಗಳನ್ನು ನಿರ್ಮಿಸಿದ ಶುಭ್ಮನ್ ಗಿಲ್
ಆದರೆ ಈ ಹಂತದಲ್ಲಿ ವಿಧ್ವತ್ ಕಾವೇರಪ್ಪ ಹಾಗೂ ವಿಜಯ್ಕುಮಾರ್ ವೈಶಾಖ್ ಬೇಗನೆ ಔಟಾದರು. ಪರಿಣಾಮ ಕರ್ನಾಟಕ ತಂಡವು 606 ರನ್ಗಳಿಗೆ ಆಲೌಟ್ ಆಯಿತು. ಇನ್ನು ಕೊನೆಯವರೆಗೂ ಕ್ರೀಸ್ ಕಚ್ಚಿ ನಿಂತಿದ್ದ ಶ್ರೇಯಸ್ ಗೋಪಾಲ್ 288 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ನೊಂದಿಗೆ ಅಜೇಯ 161 ರನ್ ಬಾರಿಸಿ ಮಿಂಚಿದರು.
ಇದೀಗ 490 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಉತ್ತರಾಖಂಡ್ ತಂಡವು 3ನೇ ದಿನದಾಟದ ಅಂತ್ಯಕ್ಕೆ 103 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಸದ್ಯ 384 ರನ್ಗಳ ಹಿನ್ನಡೆಯಲ್ಲಿರುವ ಉತ್ತರಾಖಂಡ್ ತಂಡವು ಸೋಲಿನ ಭೀತಿಯಲ್ಲಿದ್ದು, ಇದರೊಳಗೆ ಕರ್ನಾಟಕ ತಂಡವು 7 ವಿಕೆಟ್ ಪಡೆದರೆ ಇನಿಂಗ್ಸ್ ಜಯ ಸಾಧಿಸಬಹುದು.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಮುರಳೀಧರ ವೆಂಕಟೇಶ್ , ಶರತ್ ಬಿಆರ್ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
ಉತ್ತರಾಖಂಡ್ ಪ್ಲೇಯಿಂಗ್ ಇಲೆವೆನ್: ಆದಿತ್ಯ ತಾರೆ (ವಿಕೆಟ್ ಕೀಪರ್) , ಜೀವನ್ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಅಖಿಲ್ ರಾವತ್ , ಅವನೀಶ್ ಸುಧಾ , ಅಭಯ್ ನೇಗಿ , ಸ್ವಪ್ನಿಲ್ ಸಿಂಗ್ , ದಿಕ್ಷಾಂಶು ನೇಗಿ , ಮಯಾಂಕ್ ಮಿಶ್ರಾ , ದೀಪಕ್ ಧಪೋಲಾ , ನಿಖಿಲ್ ಕೊಹ್ಲಿ.
Published On - 7:23 pm, Thu, 2 February 23