ಇಂಡಿಯನ್ ಪ್ರೀಮಿಯರ್ ಲೀಗ್ 15 ಆವೃತ್ತಿಯ ಕಾರಣಕ್ಕೆ ಬ್ರೇಕ್ ನೀಡಲಾಗಿದ್ದ ಪ್ರಸಕ್ತ ಸೀಸನ್ನ ರಣಜಿ ಟ್ರೋಫಿ (Ranji Trophy 2022) ನಾಕೌಟ್ ಪಂದ್ಯಗಳಿಗೆ ಇಂದು ಮರು ಚಾಲನೆ ಸಿಕ್ಕಿದೆ. ಕರ್ನಾಟಕ ತಂಡವು ಮೂರನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು (Karnataka vs Uttar Pradesh) ಎದುರಿಸುತ್ತಿದ್ದು, ಆಲೂರಿನ ಕೆಎಸ್ಸಿಎ ಕ್ರಿಕೆಟ್ ಗ್ರೌಂಡ್ನಲ್ಲಿ ಪಂದ್ಯ ಶುರುವಾಗಿದೆ. ಭಾನುವಾರ ತಡರಾತ್ರಿ ಮಳೆ ಸುರಿದ ಕಾರಣ ಕೆಎಸ್ಸಿಎ ಮೈದಾನವು ತೇವವಾಗಿತ್ತು. ಹೀಗಾಗಿ ಕ್ವಾರ್ಟರ್ಫೈನಲ್ ಪಂದ್ಯ ಕೊಂಚ ತಡವಾಗಿ ಆರಂಭವಾಗಿದೆ. ಸದ್ಯ ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರ್ಣ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ ಆರಂಭಿಸಿರುವ ಮನೀಶ್ ಪಾಂಡೆ (Manish Pandey) ಪಡೆ ಉತ್ತಮ ಆರಂಭ ಪಡೆದುಕೊಂಡಿದೆ.
ಕರ್ನಾಟಕ ಪರ ಓಪನರ್ಗಳಾಗಿ ಕಣಕ್ಕಿಳಿದ ರವಿಕುಮಾರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಉಳಿದಂತೆ ಕರುಣ್ ನಾಯರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಶ್ರೀನಿವಾಸ್ ಶರತ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ ಹಾಗೂ ವಿಜಯ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೇವದತ್ ಪಡಿಕ್ಕಲ್, ಜಗದೀಶ ಸುಚಿತ್ ಅವರನ್ನು ಬೆಂಚ್ ಕಾಯಿಸಿದ್ದು ಅಚ್ಚರಿ ಮೂಡಿಸಿದೆ.
ಇತ್ತ ಉ. ಪ್ರದೇಶ ಪರ ಸಮರ್ಥ್ ಸಿಂಗ್, ರಿಯಾನ್ ಪರಾಗ್, ಪ್ರಿನ್ಸ್ ಯಾದವ್, ರಿಂಕು ಸಿಂಗ್, ಆರ್ಯನ್ ಜುಯಾಲ್, ಧ್ರುವ್ ಜೂರೆಲ್, ಶಿವಂ ಮಾವಿ, ಅಮಖಿತ್ ರಜ್ಪೂತ್, ಯಶ್ ದಯಾಲ್ ಹಾಗೂ ಸೌರಭ್ ಕುಮಾರ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
Riyan Parag: ನೀನಿನ್ನೂ ಮಗು ಅಷ್ಟೆ: RCB vs RR ಪಂದ್ಯದ ಮಧ್ಯೆ ನಡೆದ ಘಟನೆ ಬಗ್ಗೆ ಪರಾಗ್ ಶಾಕಿಂಗ್ ಹೇಳಿಕೆ
ಎಸ್ಸಿಎ ಮೈದಾನದಲ್ಲಿ ನಡೆಯುವ ಪಂದ್ಯಕ್ಕಾಗಿ ತನ್ನದೇ ರಣತಂತ್ರ ರೂಪಿಸಿರುವ ಕರ್ನಾಟಕ, ಟೂರ್ನಿಯ ಮುಂದಿನ ಹಂತಕ್ಕೇರುವ ನಿರೀಕ್ಷೆ ಹೊಂದಿದೆ. ಆದರೆ ಕರ್ನಾಟಕ ತಂಡಕ್ಕೆ ಸ್ಟಾರ್ ಆಟಗಾರರ ಅಲಭ್ಯತೆ ಕಾಡುವುದು ಖಚಿತ. ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ರಣಜಿ ತಂಡಕ್ಕೆ ಅಲಭ್ಯರಾಗಿದ್ದಾರೆ. ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೆ.ಎಲ್. ರಾಹುಲ್ ಭಾರತವನ್ನು ಮುನ್ನಡೆಸಲಿದ್ದರೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ವಿಶ್ರಾಂತಿ ಪಡೆಯಲು ಕೇಳಲಾಗಿದೆ.
ಇನ್ನು ಅಭಿಮನ್ಯು ಈಶ್ವರನ್ ನಾಯಕನಾಗಿರುವ ಬೆಂಗಾಲ್ ತಂಡ ಜಾರ್ಖಂಡ್ ವಿರುದ್ಧ ಟಾಸ್ ಸೋತರೂ ಉತ್ತಮ ಆರಂಭ ಪಡೆದುಕೊಂಡಿದೆ. ನಾಯಕ ಹಾಗೂ ಅಭಿಷೇಕ್ ರಾಮನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮುಂಬೈ ಹಾಗೂ ಉತ್ತರಖಂಡ್ ನಡುವಣ ಪಂದ್ಯದಲ್ಲಿ ಮುಂಬೈ ಬ್ಯಾಟಿಂಗ್ ಆಯ್ಕೆ ಮಾಡಿದೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ರನ್ ಕಲೆಹಾಕುತ್ತಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Mon, 6 June 22