ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ (Ranji Trophy 2024) ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಪಂಜಾಬ್ ದಿಟ್ಟ ಹೋರಾಟ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾಗಿದ್ದರು.
ಮೊದಲ ಇನಿಂಗ್ಸ್ನಲ್ಲಿ ವಾಸುಕಿ ಕೌಶಿಕ್ ಕರಾರುವಾಕ್ ದಾಳಿಗೆ ತತ್ತರಿಸಿದ ಪಂಜಾಬ್ ತಂಡವು ಕೇವಲ 152 ರನ್ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ (193) ಹಾಗೂ ಮನೀಶ್ ಪಾಂಡೆ (118) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಈ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 514 ರನ್ ಬಾರಿಸಿ ಕರ್ನಾಟಕ ತಂಡವು ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. 362 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಮೊದಲ ವಿಕೆಟ್ಗೆ 192 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 91 ರನ್ಗಳಿಸಿದ್ದ ಅಭಿಷೇಕ್ ವಿಕೆಟ್ ಪಡೆಯುವಲ್ಲಿ ರವಿಕುಮಾರ್ ಸಮರ್ಥ್ ಯಶಸ್ವಿಯಾದರು. ಇದಾಗ್ಯೂ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಪ್ರಭ್‌ಸಿಮ್ರಾನ್ ಸಿಂಗ್ 146 ಎಸೆತಗಳಲ್ಲಿ 17 ಫೋರ್ಗಳೊಂದಿಗೆ ಶತಕ ಸಿಡಿಸಿ ವಿಧ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕಣಕ್ಕಿಳಿದ ನಮನ್ ಧಿರ್ 20 ರನ್ಗಳಿಸಿ ಔಟಾದರೆ, ನಾಯಕ ಮಂದೀಪ್ ಸಿಂಗ್ (20) ಹಾಗೂ ನೆಹಾಲ್ ವಧೇರ (9) ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಪಂಜಾಬ್ ತಂಡವು 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದೆ.
ಇದಾಗ್ಯೂ ಪಂಜಾಬ್ ತಂಡ 124 ರನ್ಗಳ ಹಿನ್ನಡೆ ಹೊಂದಿದ್ದು, ನಾಲ್ಕನೇ ದಿನದಾಟದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ವಿಶ್ವಾಸದಲ್ಲಿದ್ದಾರೆ ಕರ್ನಾಟಕ ಬೌಲರ್ಗಳು.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ರವಿಕುಮಾರ್ ಸಮರ್ಥ್ , ಮನೀಶ್ ಪಾಂಡೆ , ನಿಕಿನ್ ಜೋಸ್ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಶುಭಾಂಗ್ ಹೆಗ್ಡೆ , ವಿಜಯ್ ಕುಮಾರ್ ವೈಶಾಕ್ , ರೋಹಿತ್ ಕುಮಾರ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್.
ಇದನ್ನೂ ಓದಿ: David Warner: ದಾಖಲೆಯೊಂದಿಗೆ ವಿದಾಯ ಹೇಳಿದ ಡೇವಿಡ್ ವಾರ್ನರ್
ಪಂಜಾಬ್ ಪ್ಲೇಯಿಂಗ್ 11: ಪ್ರಭ್‌ಸಿಮ್ರಾನ್ ಸಿಂಗ್ , ಅಭಿಷೇಕ್ ಶರ್ಮಾ , ಮನ್‌ದೀಪ್ ಸಿಂಗ್ (ನಾಯಕ) , ನೆಹಾಲ್ ವಧೇರ , ನಮನ್ ಧೀರ್ , ಗೀತಾಂಶ್ ಖೇರಾ (ವಿಕೆಟ್ ಕೀಪರ್) , ಬಲ್ತೇಜ್ ಸಿಂಗ್ , ಮಯಾಂಕ್ ಮಾರ್ಕಾಂಡೆ , ಪ್ರೀತ್ ದತ್ತಾ , ಸಿದ್ದಾರ್ಥ್ ಕೌಲ್ , ಅರ್ಷದೀಪ್ ಸಿಂಗ್.