ಡಿ.ಆರ್. ಬೇಂದ್ರೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಸೀಸನ್ನ ಮೊದಲ ರಣಜಿ ಪಂದ್ಯದಲ್ಲಿ (Ranji Trophy) ಕರ್ನಾಟಕ ತಂಡ ಪಂಜಾಬ್ ತಂಡವನ್ನು (Punjab vs Karnataka) 7 ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ ರಣಜಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 152 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 514 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ದಿಟ್ಟ ಹೋರಾಟ ನೀಡಿ 413 ರನ್ ಕಲೆಹಾಕಿತು. ಈ ಮೂಲಕ ಕರ್ನಾಟಕಕ್ಕೆ 52 ರನ್ಗಳ ಅಲ್ಪ ಗುರಿ ನೀಡಿತು. ಈ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಮೊದಲ ಇನ್ನಿಂಗ್ಸ್ನಲ್ಲಿ ವೇಗಿ ವಿ ಕೌಶಿಕ್ ದಾಳಿಗೆ ನಲುಗಿದ ಪಂಜಾಬ್ ಕೇವಲ 152 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನೆಹಾಲ್ ವಧೇರಾ ಅತ್ಯಧಿಕ 44 ರನ್ಗಳ ಇನ್ನಿಂಗ್ಸ್ ಆಡಿದರೆ, ಅಭಿಷೇಕ್ ಶರ್ಮಾ 26 ರನ್, ಗೀತಾಂಶ ಖೇರಾ 27 ರನ್ ಹಾಗೂ ಮಯಾಂಕ್ ಮಾರ್ಕಂಡೆ 26 ರನ್ಗಳ ಕೊಡುಗೆ ನೀಡಿದರು. ಕರ್ನಾಟಕದ ಪರ ಬೌಲಿಂಗ್ನಲ್ಲಿ ಮಿಂಚಿದ ಕೌಶಿಕ್ 7 ವಿಕೆಟ್ ಪಡೆದು ಮಿಂಚಿದರು.
ಅತಿ ಕಿರಿ ವಯಸ್ಸಿನಲ್ಲಿ ರಣಜಿಗೆ ಪದಾರ್ಪಣೆ; ಇತಿಹಾಸ ಸೃಷ್ಟಿಸಿದ ಬಿಹಾರದ ಯುವ ಕ್ರಿಕೆಟಿಗ..!
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಇಬ್ಬರು ಆಟಗಾರರ ಶತಕ ಹಾಗೂ 1 ಅರ್ಧಶತಕದ ಆಧಾರದ ಮೇಲೆ 8 ವಿಕೆಟ್ ಕಳೆದುಕೊಂಡು 514 ರನ್ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ ದೇವದತ್ ಪಡಿಕಲ್ 193 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರೆ, ಮನೀಶ್ ಪಾಂಡೆ 118 ರನ್ ಸಿಡಿಸಿದರು. ಹಾಗೆಯೇ ಶ್ರೀನಿವಾಸ್ ಶರತ್ ಕೂಡ 76 ರನ್ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರು.
362 ರನ್ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ಗೆ ಈ ಬಾರಿ ಆರಂಭಿಕರು ನೆರವಾದರು. ಆರಂಭಿಕ ಅಭಿಷೇಕ್ ಶರ್ಮಾ 91 ರನ್ ಸಿಡಿಸಿದರೆ, ಮತ್ತೊಬ್ಬ ಆರಂಭಿಕ ಶತಕದ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ಗೀತಾಂಶ ಖೇರಾ 43 ರನ್ಗಳ ಕೊಡುಗೆ ನೀಡಿದರು. ಹೀಗಾಗಿ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 413 ರನ್ ಕಲೆಹಾಕಿ ಕರ್ನಾಟಕಕ್ಕೆ ಕೇವಲ 52 ರನ್ಗಳ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಪರ ರೋಹಿತ್ ಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ 3 ವಿಕೆಟ್ ಪಡೆದು ಮಿಂಚಿದರು.
52 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಆರ್. ಸಮರ್ಥ್ 21 ರನ್, ಶರತ್ ಅಜೇಯ 21 ರನ್ ಹಾಗೂ ಮನೀಶ್ ಪಾಂಡೆ ಅಜೇಯ 10 ರನ್ ಸಿಡಿಸಿದರು. ಆದರೆ ಆಡಿದ ಎರಡೂ ಇನ್ನಿಂಗ್ಸ್ಗಳಲ್ಲಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಖಾತೆಯನ್ನೇ ತೆರೆಯದಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Mon, 8 January 24