Ranji Trophy 2024: ನಾಗಾಲ್ಯಾಂಡ್ ವಿರುದ್ಧ ಹೈದರಾಬಾದ್​​ಗೆ ಅಮೋಘ ಜಯ

| Updated By: ಝಾಹಿರ್ ಯೂಸುಫ್

Updated on: Jan 07, 2024 | 6:46 AM

Ranji Trophy 2024: ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ರಾಹುಲ್ ಸಿಂಗ್ 157 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 23 ಫೋರ್​ಗಳೊಂದಿಗೆ 214 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ತಿಲಕ್ ವರ್ಮಾ 112 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.

Ranji Trophy 2024: ನಾಗಾಲ್ಯಾಂಡ್ ವಿರುದ್ಧ ಹೈದರಾಬಾದ್​​ಗೆ ಅಮೋಘ ಜಯ
ಸಾಂದರ್ಭಿಕ ಚಿತ್ರ
Follow us on

Ranji Trophy 2024: ದಿಮಾಪುರ್​ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಡೆದ ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹೈದರಾಬಾದ್ (Hyderabad) ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ 80 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಬಂದ ರಾಹುಲ್ ಸಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದ ರಾಹುಲ್ ಸಿಂಗ್ ನಾಗಾಲ್ಯಾಂಡ್ ಬೌಲರ್​ಗಳ ಬೆಂಡೆತ್ತಿದರು. ಅಲ್ಲದೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈಯ್ಯುವ ಮೂಲಕ ಭರ್ಜರಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ರಾಹುಲ್ ಸಿಂಗ್ 157 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 23 ಫೋರ್​ಗಳೊಂದಿಗೆ 214 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ತಿಲಕ್ ವರ್ಮಾ 112 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.

ಅಂತಿಮವಾಗಿ ಹೈದರಾಬಾದ್ ತಂಡವು 5 ವಿಕೆಟ್ ನಷ್ಟಕ್ಕೆ 474 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ನಾಗಾಲ್ಯಾಂಡ್ ತಂಡವು ತನಯ್ ತ್ಯಾಗರಾಜನ್ ದಾಳಿಗೆ ತತ್ತರಿಸಿತು. ಪರಿಣಾಮ ನಾಗಾಲ್ಯಾಂಡ್ ಕೇವಲ 153 ರನ್​ಗಳಿಗೆ ಆಲೌಟ್ ಆಗಿದೆ. ಹೈದರಾಬಾದ್ ಪರ ತ್ಯಾಗರಾಜನ್ ಕೇವಲ 43 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

ಕೇವಲ 153 ರನ್​ಗಳಿಗೆ ಆಲೌಟ್ ಆದ ನಾಗಾಲ್ಯಾಂಡ್ ಮೇಲೆ ಫಾಲೋಆನ್ ಹೇರಿದ ಹೈದರಾಬಾದ್ ತಂಡವು ದ್ವಿತೀಯ ಇನಿಂಗ್ಸ್​ಗೆ ಆಹ್ವಾನಿಸಿತು. ಈ ಬಾರಿ ಕೂಡ ನಾಗಾಲ್ಯಾಂಡ್​ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಅಲ್ಲದೆ ಕೇವಲ 127 ರನ್​ಗಳಿಗೆ ಆಲೌಟ್ ಆಗಿ 194 ರನ್​ಗಳ ಹೀನಾಯ ಸೋಲನುಭವಿಸಿದೆ. ಈ ಅಮೋಘ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಈ ಬಾರಿಯ ರಣಜಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ನಾಗಾಲ್ಯಾಂಡ್ ಪ್ಲೇಯಿಂಗ್ 11: ರೊಂಗ್ಸೆನ್ ಜೊನಾಥನ್ (ನಾಯಕ) , ಇಮ್ಲಿವಾಟಿ ಲೆಮ್ತೂರ್ , ಸುಮಿತ್ ಕುಮಾರ್ (ವಿಕೆಟ್ ಕೀಪರ್) , ಜೋಶುವಾ ಒಜುಕುಮ್ , ತಹಮೀದ್ ರೆಹಮಾನ್ , ಜಗನಾಥ್ ಸಿನಿವಾಸ್ , ಸೆಡೆಝಾಲೀ ರುಪೆರೊ , ನ್ಜಾಂತುಂಗ್ ಮೊಝುಯಿ , ಕ್ರಿವಿಟ್ಸೊ ಕೆನ್ಸ್ , ನಾಗಹೊ ಚಿಶಿ , ಕರಣ್ ತೆವಾಟಿಯಾ.

ಇದನ್ನೂ ಓದಿ: IPL 2024: RCB ಬೌಲಿಂಗ್ ಲೈನಪ್​ ಹೇಗಿದೆ? ಮೋಯೆ ಮೋಯೆ ಎಂದ ಚಹಲ್..!

ಹೈದರಾಬಾದ್ ಪ್ಲೇಯಿಂಗ್ 11: ತನ್ಮಯ್ ಅಗರ್ವಾಲ್ , ರೋಹಿತ್ ರಾಯುಡು , ಜಿ. ರಾಹುಲ್ ಸಿಂಗ್ , ತಿಲಕ್ ವರ್ಮಾ (ನಾಯಕ) , ಚಂದನ್ ಸಹಾನಿ , ಪ್ರಗ್ನಯ್ ರೆಡ್ಡಿ (ವಿಕೆಟ್ ಕೀಪರ್) , ತೆಲುಕುಪಲ್ಲಿ ರವಿ ತೇಜ , ತನಯ್ ತ್ಯಾಗರಾಜನ್ , ಚಾಮ ವಿ ಮಿಲಿಂದ್ , ಎಲ್ಲಿಗರಂ ಸಂಕೇತ್ , ಕಾರ್ತಿಕೇಯ ಕಾಕ್.