AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ಕೈಕೊಟ್ಟ ಬ್ಯಾಟರ್​ಗಳು: ಕರ್ನಾಟಕ ತಂಡದ ರಣಜಿ ಟ್ರೋಫಿ ಕನಸು ಭಗ್ನ

Ranji Trophy 2024: ಈ ಬಾರಿಯ ರಣಜಿ ಟೂರ್ನಿಯಲ್ಲಿ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ನಿರ್ಣಾಯಕವಾಗಿದ್ಧ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗಲ್ಲುವ ಉತ್ತಮ ಅವಕಾಶವಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಕೈಕೊಟ್ಟ ಪರಿಣಾಮ ಇದೀಗ ಟೂರ್ನಿಯಿಂದ ಹೊರಬಿದ್ದಿದೆ.

Ranji Trophy 2024: ಕೈಕೊಟ್ಟ ಬ್ಯಾಟರ್​ಗಳು: ಕರ್ನಾಟಕ ತಂಡದ ರಣಜಿ ಟ್ರೋಫಿ ಕನಸು ಭಗ್ನ
Karnataka TeamImage Credit source: The Hindu
TV9 Web
| Updated By: ಝಾಹಿರ್ ಯೂಸುಫ್|

Updated on: Feb 27, 2024 | 1:31 PM

Share

ನಾಗ್​ಪುರದಲ್ಲಿ ನಡೆದ ರಣಜಿ ಟ್ರೋಫಿಯ (Ranji Trophy 2024) ಮೊದಲ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಕರ್ನಾಟಕ (Karanataka) ವಿರುದ್ಧ ವಿದರ್ಭ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ವಿದರ್ಭ ಪರ ಆರಂಭಿಕ ಆಟಗಾರ ಅಥರ್ವ ತೈಡೆ (109) ಭರ್ಜರಿ ಶತಕ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್ ರಾಥೋಡ್ (93) ಅರ್ಧಶತಕದ ಕೊಡುಗೆ ನೀಡಿದರು. ಹಾಗೆಯೇ ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ 90 ರನ್​ ಚಚ್ಚಿದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ವಿದರ್ಭ ತಂಡವು 460 ರನ್​ಗಳಿಸಿ ಆಲೌಟ್ ಆಯಿತು.

ಈ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ಔಟಾಗುವುದರೊಂದಿಗೆ ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ (59) ಅರ್ಧಶತಕ ಬಾರಿಸಿ ಮಿಂಚಿದರು.

ಇನ್ನು ಅನೀಶ್ 34 ರನ್​ಗಳಿಸಿದರೆ, ನಿಕಿನ್ ಜೋಸ್ 82 ರನ್​ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅನುಭವಿ ಆಟಗಾರ ಮನೀಶ್ ಪಾಂಡೆ ಕೇವಲ 15 ರನ್​ಗಳಿಸಿದರೆ, ಹಾರ್ದಿಕ್ ರಾಜ್ 23, ಎಸ್ ಶರತ್ 29 ರನ್​ಗಳಿಸಿ ಔಟಾದರು. ಅಂತಿಮವಾಗಿ 286 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಕರ್ನಾಟಕ ತಂಡವು 174 ರನ್​ಗಳ ಹಿನ್ನಡೆ ಅನುಭವಿಸಿತು.

ಮೊದಲ ಇನಿಂಗ್ಸ್​ನಲ್ಲಿ ಭರ್ಜರಿ ಮುನ್ನಡೆ ಪಡೆದ ವಿದರ್ಭ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾಗಿದ್ದರು. ಮಿಂಚಿನ ದಾಳಿ ಸಂಘಟಿಸಿದ ವೇಗಿ ವಿಧ್ವತ್ ಕಾವೇರಪ್ಪ ಕೇವಲ 61 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಪರಿಣಾಮ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 196 ರನ್​ಗಳಿಗೆ ಆಲೌಟ್ ಆಯಿತು.

ಅದರಂತೆ ಕರ್ನಾಟಕ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 370 ರನ್​ಗಳ ಗುರಿ ಪಡೆಯಿತು. ಈ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ (70) ಹಾಗೂ ರವಿಕುಮಾರ್ ಸಮರ್ಥ್ (40) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನೀಶ್ 40 ರನ್​ಗಳ ಕೊಡುಗೆ ನೀಡಿದರು.

ಆದರೆ ಆ ಬಳಿಕ ಬಂದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಕಿನ್ ಜೋಸ್ (0) ಶೂನ್ಯಕ್ಕೆ ಔಟಾದರೆ, ಮನೀಶ್ ಪಾಂಡೆ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಹಾರ್ದಿಕ್ ಪಾಂಡ್ಯ (16), ಎಸ್. ಶರತ್ (6) ಬಂದ ವೇಗದಲ್ಲೇ ಹಿಂತಿರುಗಿದರು.

ಅಂತಿಮ ಹಂತದಲ್ಲಿ ವಿಜಯಕುಮಾರ್ ವೈಶಾಕ್ (34) ಹಾಗೂ ವಿಧ್ವತ್ ಕಾವೇರಪ್ಪ (25) ಕ್ರೀಸ್ ಕಚ್ಚಿ ನಿಂತರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 243 ರನ್​ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡವು 127 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನೊಂದಿಗೆ ಕರ್ನಾಟಕ ತಂಡದ ರಣಜಿ ಟ್ರೋಫಿ ಗೆಲ್ಲುವ ಕನಸು ಕೂಡ ಕಮರಿದೆ. ಅತ್ತ ಭರ್ಜರಿ ಗೆಲುವಿನೊಂದಿಗೆ ವಿದರ್ಭ ತಂಡವು ರಣಜಿ ಟ್ರೋಫಿ 2024 ರ ಸೆಮಿಫೈನಲ್​ ಹಂತಕ್ಕೇರಿದೆ.

ವಿದರ್ಭ ಪ್ಲೇಯಿಂಗ್ 11: ಧ್ರುವ ಶೋರೆ , ಅಥರ್ವ ತೈಡೆ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಮೋಹಿತ್ ಕಾಳೆ , ಯಶ್ ರಾಥೋಡ್ , ಆದಿತ್ಯ ಸರ್ವತೆ , ಯಶ್ ಠಾಕೂರ್ , ಹರ್ಷ ದುಬೆ , ಉಮೇಶ್ ಯಾದವ್ , ಆದಿತ್ಯ ಠಾಕರೆ.

ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್​ ಫೈನಲ್​

ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಹಾರ್ದಿಕ್ ರಾಜ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಧೀರಜ್ ಗೌಡ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.