
ನಾಗ್ಪುರದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ವಿದರ್ಭ ನಡುವಣ ರಣಜಿ ಟ್ರೋಫಿಯ (Ranji Trophy 2024) ಕ್ವಾರ್ಟರ್ ಫೈನಲ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡವು ಅಥರ್ವ ತೈಡೆ (109) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 460 ರನ್ ಕಲೆಹಾಕಿತು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ಪರ ನಿಕಿಲ್ ಜೋಸ್ (84) ಹಾಗೂ ರವಿಕುಮಾರ್ ಸಮರ್ಥ್ (59) ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಕರ್ನಾಟಕ ತಂಡವು 286 ರನ್ಗಳಿಸಿ ಆಲೌಟ್ ಆಯಿತು.
174 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡಕ್ಕೆ ಆಘಾತ ನೀಡುವಲ್ಲಿ ಯುವ ವೇಗಿ ವಿಧ್ವತ್ ಕಾವೇರಪ್ಪ ಯಶಸ್ವಿಯಾದರು. ಕರಾರುವಾಕ್ ದಾಳಿ ಸಂಘಟಿಸಿದ ಕಾವೇರಪ್ಪ ಕೇವಲ 61 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 196 ರನ್ಗಳಿಗೆ ಆಲೌಟ್ ಆಯಿತು.
ದ್ವಿತೀಯ ಇನಿಂಗ್ಸ್ನಲ್ಲಿ 370 ರನ್ಗಳ ಗುರಿ ಪಡೆದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ (70) ಹಾಗೂ ರವಿಕುಮಾರ್ ಸಮರ್ಥ್ (40) ಭರ್ಜರಿ ಆರಂಭ ಒದಗಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು 136 ರನ್ ಕಲೆಹಾಕಿದೆ. ಇನ್ನು ಐದನೇ ದಿನದಾಟದ ಮುಕ್ತಾಯದ ವೇಳೆಗೆ 235 ರನ್ಗಳಿಸಿದರೆ ಕರ್ನಾಟಕ ತಂಡವು ಗೆಲುವಿನೊಂದಿಗೆ ಸೆಮಿಫೈನಲ್ಗೇರಬಹುದು. ಹೀಗಾಗಿ ಕೊನೆಯ ದಿನದಾಟವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವೇಳೆ ಈ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡರೆ ವಿದರ್ಭ ತಂಡ ಸೆಮಿಫೈನಲ್ಗೇರಲಿದೆ. ಏಕೆಂದರೆ ನಾಕೌಟ್ ಹಂತದಲ್ಲಿ ಪಂದ್ಯವು ಡ್ರಾ ಆದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿರುವ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ವಿದರ್ಭ ಪ್ಲೇಯಿಂಗ್ 11: ಧ್ರುವ ಶೋರೆ , ಅಥರ್ವ ತೈಡೆ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಮೋಹಿತ್ ಕಾಳೆ , ಯಶ್ ರಾಥೋಡ್ , ಆದಿತ್ಯ ಸರ್ವತೆ , ಯಶ್ ಠಾಕೂರ್ , ಹರ್ಷ ದುಬೆ , ಉಮೇಶ್ ಯಾದವ್ , ಆದಿತ್ಯ ಠಾಕರೆ.
ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್ ಫೈನಲ್
ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಹಾರ್ದಿಕ್ ರಾಜ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಧೀರಜ್ ಗೌಡ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.