Ranji Trophy: ರಣಜಿ ಟ್ರೋಫಿ ಗೆದ್ದರೆ ಪ್ರತಿ ಆಟಗಾರರಿಗೆ BMW ಕಾರು ಮತ್ತು 1 ಕೋಟಿ ರೂ: HCA
Ranji Trophy 2024: ಈ ಬಾರಿಯ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ನ ಎಲ್ಲಾ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಬರೋಡ ವಿರುದ್ಧ ಮುಂಬೈ ಕಣಕ್ಕಿಳಿಯಲಿದೆ.

ಹೈದರಾಬಾದ್ ತಂಡವು ಮುಂದಿನ ಮೂರು ವರ್ಷಗಳಲ್ಲಿ ರಣಜಿ ಟ್ರೋಫಿ (Ranji Trophy) ಗೆದ್ದರೆ ಪ್ರತಿಯೊಬ್ಬ ಆಟಗಾರನಿಗೆ BMW ಕಾರು ಮತ್ತು 1 ಕೋಟಿ ರೂ. ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಅಸೋಷಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ವಾಗ್ದಾಣ ಮಾಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಪ್ಲೇಟ್ ಗ್ರೂಪ್ನಲ್ಲಿ ಕಣಕ್ಕಿಳಿದಿದ್ದ ಹೈದರಾಬಾದ್ ತಂಡವು ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಸೀಸನ್ಗಾಗಿ ಎಲೈಟ್ ಗ್ರೂಪ್ಗೆ ಅರ್ಹತೆ ಪಡೆದುಕೊಂಡಿದೆ.
ಈ ಸಾಧನೆಗಾಗಿ ಹೈದರಾಬಾದ್ ಆಟಗಾರರನ್ನು ಸನ್ಮಾನಿಸಿದ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA), ಪ್ಲೇಟ್ ಗ್ರೂಪ್ ಚಾಂಪಿಯನ್ ತಂಡಕ್ಕೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಹಾಗೆಯೇ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 50,000 ರೂ. ಪ್ರೋತ್ಸಾಹ ಮೊತ್ತ ನೀಡಿದೆ.
ಇದೇ ವೇಳೆ ಮಾತನಾಡಿದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಜಗನ್ ಮೋಹನ್ ರಾವ್, ಮುಂದಿನ ಮೂರು ವರ್ಷಗಳಲ್ಲಿ ಹೈದರಾಬಾದ್ ತಂಡವು ರಣಜಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದರೆ ಪ್ರತಿಯೊಬ್ಬರಿಗೂ ಭರ್ಜರಿ ಬಹುಮಾನ ನೀಡಲಿದ್ದೇವೆ. ನೀವು ಕಪ್ ಗೆದ್ದರೆ ಪ್ರತಿ ಆಟಗಾರನಿಗೆ ಬಿಎಂಡಬ್ಲ್ಯು ಕಾರು ನೀಡುತ್ತೇವೆ. ಹಾಗೆಯೇ ತಂಡಕ್ಕೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
89 ವರ್ಷಗಳ ಇತಿಹಾಸ ಹೊಂದಿರುವ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡವು ಕೇವಲ 2 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1937-38 ರಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಿದ್ದ ಹೈದರಾಬಾದ್ ಬಳಿಕ 1986-87 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಆದರೆ ಕಳೆದ ಎರಡು ದಶಕಗಳಿಂದ ಹೈದರಾಬಾದ್ ತಂಡಕ್ಕೆ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಅದರಲ್ಲೂ ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಈ ಬಾರಿ ಪ್ಲೇಟ್ ಗ್ರೂಪ್ನಲ್ಲಿ ಕಣಕ್ಕಿಳಿದಿತ್ತು. ಇದೀಗ ಪ್ಲೇಟ್ ಗ್ರೂಪ್ ಫೈನಲ್ನಲ್ಲಿ ಮೇಘಾಲಯ ತಂಡಕ್ಕೆ ಸೋಲುಣಿಸಿ ಮುಂದಿನ ರಣಜಿ ಸೀಸನ್ಗೆ ಎಲೈಟ್ ಗ್ರೂಪ್ಗೆ ಅರ್ಹತೆ ಪಡೆದುಕೊಂಡಿದೆ.
ಅದರಂತೆ ಮುಂದಿನ ಸೀಸನ್ ರಣಜಿ ಟ್ರೋಫಿ ಪೈಪೋಟಿಯಲ್ಲಿ ಹೈದರಾಬಾದ್ ತಂಡ ಕೂಡ ಕಾಣಿಸಿಕೊಳ್ಳಲಿದೆ. ಒಂದು ವೇಳೆ 2024-25 ರಿಂದ 2026-27 ರ ನಡುವೆ ಹೈದರಾಬಾದ್ ತಂಡ ರಣಜಿ ಟ್ರೋಫಿ ಎತ್ತಿ ಹಿಡಿದರೆ ಪ್ರತಿ ಆಟಗಾರನಿಗೆ BMW ಕಾರು ಸಿಗಲಿದೆ. ಹಾಗೆಯೇ ತಂಡಕ್ಕೆ 1 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.
ಇದನ್ನೂ ಓದಿ: IPL 2024: ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್:
ಈ ಬಾರಿಯ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಂತಕ್ಕೆ ಬಂದು ನಿಂತಿದೆ. ಕ್ವಾರ್ಟರ್ ಫೈನಲ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಅದರಂತೆ ಫೆಬ್ರವರಿ 23 ರಿಂದ ಕ್ವಾರ್ಟರ್ ಫೈನಲ್ ಮುಖಾಮುಖಿಯಾಗಿ ಶುರುವಾಗಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.
- ಕರ್ನಾಟಕ vs ವಿದರ್ಭ (ವಿಸಿಎ ಸ್ಟೇಡಿಯಂ, ನಾಗ್ಪುರ್)
- ಮುಂಬೈ vs ಬರೋಡ (ಎಂಸಿಎ ಸ್ಟೇಡಿಯಂ, ಮುಂಬೈ)
- ತಮಿಳುನಾಡು vs ಸೌರಾಷ್ಟ್ರ (ಎಸ್ಆರ್ಸಿ ಗ್ರೌಂಡ್, ಕೊಯಂಬತ್ತೂರು)
- ಮಧ್ಯ ಪ್ರದೇಶ vs ಆಂಧ್ರ ಪ್ರದೇಶ (ಹೋಲ್ಕರ್ ಸ್ಟೇಡಿಯಂ, ಇಂದೋರ್)
