Taruwar Kohli: ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ
Taruwar Kohli: 2008 ರಲ್ಲಿ ಭಾರತ ತಂಡವು ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ತರುವರ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಐಪಿಎಲ್ನಲ್ಲೂ ಅವಕಾಶ ಪಡೆದಿದ್ದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದಾಗ್ಯೂ ದೇಶೀಯ ಅಂಗಳದಲ್ಲಿ ಆಲ್ರೌಂಡರ್ ಆಟದೊಂದಿಗೆ ಮಿಂಚಿದ್ದ ತರುವರ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ವಿರಾಟ್ ಕೊಹ್ಲಿಯೊಂದಿಗೆ (Virat Kohli) ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ತರುವರ್ ಕೊಹ್ಲಿ (Taruwar Kohli) ಇದೀಗ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 2008 ರಲ್ಲಿ ಭಾರತ ತಂಡವು ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ತರುವರ್ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಪಂಜಾಬ್ ಮೂಲದ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ತಮ್ಮ 35ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಒಟ್ಟು 184 ಪಂದ್ಯಗಳನ್ನು ಆಡಿರುವ ತರುವರ್ ಕೊಹ್ಲಿ ಅತ್ಯುತ್ತಮ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. 55 ಪ್ರಥಮ ದರ್ಜೆ ಪಂದ್ಯಗಳು, 72 ಲಿಸ್ಟ್-ಎ ಮತ್ತು 57 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ತರುವರ್ ಮೂರು ಮಾದರಿಗಳಲ್ಲಿ ಒಟ್ಟು 7543 ರನ್ ಗಳಿಸಿದ್ದಾರೆ. ಹಾಗೆಯೇ 133 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
ಅಷ್ಟೇ ಅಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ಮಿಜೋರಾಂ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ 307 ರನ್ ಬಾರಿಸಿದ್ದು ಅವರ ಗರಿಷ್ಠ ವೈಯುಕ್ತಿಕ ಸ್ಕೋರ್. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 14 ಶತಕ ಮತ್ತು 18 ಅರ್ಧ ಶತಕಗಳನ್ನು ಕೂಡ ಸಿಡಿಸಿದ್ದಾರೆ. ಈ ವೇಳೆ 53.80 ಸರಾಸರಿಯಲ್ಲಿ 4573 ರನ್ ಗಳಿಸಿದ್ದಾರೆ. ಇನ್ನು ಫಸ್ಟ್ ಕ್ಲಾಸ್ ಕೆರಿಯರ್ನಲ್ಲಿ 74 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಅಂಡರ್-19 ವಿಶ್ವಕಪ್ ಹೀರೋ:
2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಅಂಡರ್ ವಿಶ್ವಕಪ್ ಗೆದ್ದುಕೊಂಡಿತು. ಈ ವೇಳೆ ತರುವರ್ ಕೊಹ್ಲಿ ಕೂಡ ತಂಡದಲ್ಲಿದ್ದರು. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ತರುವರ್ ಕೊಹ್ಲಿ 6 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 218 ರನ್ ಬಾರಿಸಿದ್ದರು. ಅಲ್ಲದೆ ಪಂದ್ಯಾವಳಿಯಲ್ಲಿ ಮೂರನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
2008 ರಲ್ಲೇ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಮೊದಲು ಪಂಜಾಬ್ ಪರ ಕಣಕ್ಕಿಳಿದಿದ್ದರು. ಇನ್ನು ಕಳೆದ ವರ್ಷ ಜನವರಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಕೊನೆಯ ಪ್ರಥಮ ದರ್ಜೆ ಪಂದ್ಯದಲ್ಲಿ ಮಿಜೋರಾಂ ತಂಡವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ 2ನೇ ಮಗುವಿನ ಹೆಸರಿನ ಅರ್ಥವೇನು ಗೊತ್ತಾ?
ಐಪಿಎಲ್ಗೂ ಆಯ್ಕೆ:
2008 ರಲ್ಲಿ ತರುವರ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಮರುವರ್ಷವೇ ಆರ್ಆರ್ ತಂಡ ಅವರನ್ನು ಕೈ ಬಿಟ್ಟಿತ್ತು. ಅದರಂತೆ 2009 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕೇವಲ 4 ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದಿದ್ದ ತರುವರ್ ಕೊಹ್ಲಿ 11 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಅವರು ಐಪಿಎಲ್ನಿಂದಲೂ ಹೊರಬಿದ್ದಿದ್ದರು. ಆ ಬಳಿಕ ದೇಶೀಯ ಅಂಗದಲ್ಲಿ ಮಿಂಚಿದ್ದ ತರುವರ್ ಇದೀಗ ತಮ್ಮ 35ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
