Ben Stokes: ಮಾಡು ಇಲ್ಲವೇ ಮಡಿ ಪಂದ್ಯ: ಬೌಲಿಂಗ್ ಶುರು ಮಾಡಿದ ಬೆನ್ ಸ್ಟೋಕ್ಸ್
India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ರಾಂಚಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಲಿದ್ದಾರೆ. ಅತ್ತ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ಸರಣಿ ನಿರ್ಣಾಯಕ. ಹೀಗಾಗಿ ನಾಯಕ ಬೆನ್ ಸ್ಟೋಕ್ಸ್ ಈ ಪಂದ್ಯದಲ್ಲಿ ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 4ನೇ ಟೆಸ್ಟ್ ಪಂದ್ಯವು ಫೆಬ್ರವರಿ 23 ರಿಂದ ಶುರುವಾಗಲಿದೆ. ರಾಂಚಿಯ JSCA ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಮೂಲಕ ಭಾರತ ತಂಡವು 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ಒಂದು ವೇಳೆ ರಾಂಚಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಭಾರತದ ಪಾಲಾಗಲಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ ಇಂಗ್ಲೆಂಡ್. ಅಂದರೆ ಆಂಗ್ಲರ ಪಾಲಿಗೆ ಮುಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.
ಹೀಗಾಗಿಯೇ ಈ ಪಂದ್ಯಕ್ಕಾಗಿ ಇದೀಗ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಅಭ್ಯಾಸವನ್ನು ಶುರು ಮಾಡಿಕೊಂಡಿದ್ದಾರೆ. ರಾಂಚಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿರುವ ಸ್ಟೋಕ್ಸ್ ಬೌಲಿಂಗ್ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದಕ್ಕೆ ಒಂದು ಕಾರಣ ಕಳೆದ 2 ಪಂದ್ಯಗಳಲ್ಲಿ ಆಂಗ್ಲ ಬೌಲರ್ಗಳು ವಿಫಲರಾಗಿರುವುದು.
ಅದರಲ್ಲೂ ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡಿರುವ ಕಾರಣ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಜೋ ರೂಟ್ ಬೌಲಿಂಗ್ ಮಾಡುತ್ತಿದ್ದರೂ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಅತ್ತ ಅನುಭವಿ ವೇಗಿಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಹೀಗಾಗಿ ಹೆಚ್ಚುವರಿ ವೇಗಿಯಾಗಿ ಬೌಲಿಂಗ್ ಮಾಡಲು ಬೆನ್ ಸ್ಟೋಕ್ಸ್ ನಿರ್ಧರಿಸಿದ್ದಾರೆ.
ವಿಶೇಷ ಎಂದರೆ ಜೂನ್ 2023 ರ ಬಳಿಕ ಬೌಲಿಂಗ್ ಮಾಡದ ಬೆನ್ ಸ್ಟೋಕ್ಸ್ ಇದೀಗ ಮತ್ತೆ ಚೆಂಡೆಸೆಯಲು ನಿರ್ಧರಿಸಿದ್ದಾರೆ. ಅಂದರೆ ಸ್ಟೋಕ್ಸ್ ಕೊನೆಯ ಬಾರಿಗೆ ಬೌಲ್ ಮಾಡಿರುವುದ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿಯಲ್ಲಿ. ಇದಾದ ಬಳಿಕ ಭುಜದ ನೋವಿನ ಕಾರಣ ಅವರು ಬೌಲಿಂಗ್ ಮಾಡಿರಲಿಲ್ಲ. ಅದರಲ್ಲೂ ಏಕದಿನ ವಿಶ್ವಕಪ್ನಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡರೂ ಚೆಂಡೆಸೆಯುವ ಸಾಹಸಕ್ಕೆ ಕೈ ಹಾಕಿರಲಿಲ್ಲ.
ಇದೀಗ ಭಾರತದ ವಿರುದ್ಧ ಇಂಗ್ಲೆಂಡ್ ತಂಡಕ್ಕೆ ಗೆಲುವು ಅನಿವಾರ್ಯ. ಹೀಗಾಗಿಯೇ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ ಬೆನ್ ಸ್ಟೋಕ್ಸ್ ಭರ್ಜರಿ ತಯಾರಿಯಲಿದ್ದಾರೆ. ಈ ತಯಾರಿಯೊಂದಿಗೆ ಸ್ಟೋಕ್ಸ್ ಬೌಲಿಂಗ್ನಲ್ಲಿ ಮಿಂಚಲಿದ್ದಾರಾ ಎಂಬುದನ್ನು ಕಾದು ನೋಡೋಣ.
ಇದನ್ನೂ ಓದಿ: IPL 2024: ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ
