AUS vs NZ: ಕಿವೀಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ..!
AUS vs NZ: ವೆಲ್ಲಿಂಗ್ಟನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ ಗುರಿ ಮುಟ್ಟಿತು. ಈ ಮೂಲಕ ಆಸ್ಟ್ರೇಲಿಯ ತಂಡ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಆಸ್ಟ್ರೇಲಿಯಾ ತಂಡ ಪ್ರಸ್ತುತ ನ್ಯೂಜಿಲೆಂಡ್ (New Zealand vs Australia) ಪ್ರವಾಸದಲ್ಲಿದ್ದು, ಅಲ್ಲಿ ಮೂರು ಪಂದ್ಯಗಳ ಟಿ20 ಮತ್ತು 2 ಟೆಸ್ಟ್ ಸರಣಿಯನ್ನು ಆಡಲಿದೆ. ವೆಲ್ಲಿಂಗ್ಟನ್ ಮೈದಾನದಲ್ಲಿ ಇಂದು ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಕಾಂಗರೂ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 215 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ರವೀಂದ್ರ ಮೊದಲ ಅರ್ಧಶತಕ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕಿವೀಸ್ ತಂಡದ ಪರ ಇನಿಂಗ್ಸ್ ಆರಂಭಿಸಿದವರು ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ. ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ನಡುವೆ ಉತ್ತಮ ಪಾಲುದಾರಿಕೆ ಇತ್ತು. ಫಿನ್ ಅಲೆನ್ 17 ಎಸೆತಗಳಲ್ಲಿ 32 ರನ್ ಗಳಿಸಿದರೆ, ಕಾನ್ವೆ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 63 ರನ್‌ಗಳನ್ನು ಕಲೆಹಾಕದರು. ಈ ಇಬ್ಬರ ನಂತರ ಬಂದ ರಚಿನ್ ರವೀಂದ್ರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 35 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ಸೇರಿದಂತೆ 68 ರನ್ ಕಲೆಹಾಕಿದಲ್ಲದೆ, ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರು.
20 ಓವರ್‌ಗಳಲ್ಲಿ 215 ರನ್
ರವೀಂದ್ರಗೆ ಉತ್ತಮ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್ ಕೂಡ 10 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಈ ಮೂಲಕ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 215 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ನಾಯಕ ಮಿಚೆಲ್ ಮಾರ್ಷ್ 44 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ಒಳಗೊಂಡಂತೆ ಅಜೇಯ 72 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ 11 ಎಸೆತಗಳಲ್ಲಿ 25 ರನ್ ಗಳಿಸಿದರು.
19 ಎಸೆತಗಳಲ್ಲಿ 44 ರನ್‌ಗಳ ಜೊತೆಯಾಟ
ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡ 17ನೇ ಓವರ್ ಆಗುವಷ್ಟರಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಗಿತ್ತು ಮತ್ತು ಕೊನೆಯ 3 ಓವರ್‌ಗಳಲ್ಲಿ ಗೆಲುವಿಗೆ 43 ರನ್‌ಗಳ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಒಂದು ತುದಿಯಲ್ಲಿ ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮಾಡುತ್ತಿದ್ದ ಕಾಂಗರೂ ತಂಡದ ನಾಯಕ ಮಿಚೆಲ್ ಮಾರ್ಷ್ ಅವರಿಗೆ ಟಿಮ್ ಡೇವಿಡ್ ಬೆಂಬಲ ಸಿಕ್ಕಿತು. ಇದರಲ್ಲಿ ಡೇವಿಡ್ ಕೇವಲ 10 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ 31 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮಾರ್ಷ್ ಮತ್ತು ಡೇವಿಡ್ ನಡುವೆ 5ನೇ ವಿಕೆಟ್‌ಗೆ ಕೇವಲ 19 ಎಸೆತಗಳಲ್ಲಿ 44 ರನ್‌ಗಳ ಜೊತೆಯಾಟವಿತ್ತು. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 21 February 24