Ranji Trophy 2024: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ
Ranji Trophy 2024: ಬಹುನಿರೀಕ್ಷಿತ ರಣಜಿ ಟೂರ್ನಿಯು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈ ಬಾರಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ತಂಡವು 7 ಪಂದ್ಯಗಳಲ್ಲಿ 3 ಜಯ, 3 ಡ್ರಾನೊಂದಿಗೆ ಇದೀಗ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ವಿದರ್ಭ ವಿರುದ್ಧ ಕಣಕ್ಕಿಳಿಯಲಿದೆ.
ದೇಶೀಯ ಅಂಗಳದ ಟೆಸ್ಟ್ ಪಂದ್ಯಾವಳಿ ರಣಜಿ ಟೂರ್ನಿಯು (Ranji Trophy 2024) ನಾಕೌಟ್ ಹಂತಕ್ಕೆ ಬಂದು ನಿಂತಿದೆ. 38 ತಂಡಗಳೊಂದಿಗೆ ಶುರುವಾದ ಟೂರ್ನಿಯಿಂದ 30 ಟೀಮ್ಗಳು ಹೊರಬಿದ್ದಿದ್ದು, 8 ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಈ ಎಂಟು ತಂಡಗಳಲ್ಲಿ ದಕ್ಷಿಣ ಭಾರತದ ಮೂರು ತಂಡಗಳಿರುವುದು ವಿಶೆಷ. ಇನ್ನು ಈ ಬಾರಿಯ ರಣಜಿ ಟೂರ್ನಿ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ.
ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ ತಂಡಗಳು:
- ಕರ್ನಾಟಕ
- ವಿದರ್ಭ
- ಮುಂಬೈ
- ಬರೋಡ
- ತಮಿಳುನಾಡು
- ಸೌರಾಷ್ಟ್ರ
- ಮಧ್ಯಪ್ರದೇಶ
- ಆಂಧ್ರ ಪ್ರದೇಶ
ಗ್ರೂಪ್ ಹಂತದಿಂದ ಕ್ವಾರ್ಟರ್ ಫೈನಲ್ಗೆ:
ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು ಗ್ರೂಪ್-ಎ ನಿಂದ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಇನ್ನು ಗ್ರೂಪ್-ಬಿ ನಿಂದ ಮುಂಬೈ ಮತ್ತು ಆಂಧ್ರ ಪ್ರದೇಶ ತಂಡಗಳು ಮುಂದಿನ ಹಂತಕ್ಕೇರಿದರೆ, ಬಲಿಷ್ಠ ಬೆಂಗಾಳ್, ಕೇರಳ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
ಗ್ರೂಪ್-ಸಿ ಪಾಯಿಂಟ್ಸ್ ಟೇಬಲ್ನಲ್ಲಿ ತಮಿಳುನಾಡು ತಂಡ ಅಗ್ರಸ್ಥಾನ ಅಲಂಕರಿಸಿದರೆ, ಕರ್ನಾಟಕ ತಂಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿತು. ಈ ಮೂಲಕ ಉಭಯ ತಂಡಗಳು ಕ್ವಾರ್ಟರ್ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಇದೇ ವೇಳೆ ಗುಜರಾತ್ ಮತ್ತು ರೈಲ್ವೇಸ್ ತಂಡಗಳು ಮುಂದಿನ ಹಂತಕ್ಕೇರಲು ವಿಫಲವಾಗಿದೆ.
ಇನ್ನು ಗ್ರೂಪ್-ಡಿ ನಿಂದ ಮಧ್ಯಮ ಪ್ರದೇಶ ಮತ್ತು ಬರೋಡ ತಂಡಗಳು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಒಟ್ಟು 8 ತಂಡಗಳು ಸೆಮಿಫೈನಲ್ ಅರ್ಹತೆಗಾಗಿ ಸೆಣಸಲಿದೆ.
ಕ್ವಾರ್ಟರ್ ಫೈನಲ್ ವೇಳಾಪಟ್ಟಿ:
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಬರೋಡ ವಿರುದ್ಧ ಮುಂಬೈ ಕಣಕ್ಕಿಳಿಯಲಿದೆ. ಹಾಗೆಯೇ ತಮಿಳುನಾಡು ಮತ್ತು ಸೌರಾಷ್ಟ್ರ ತಂಡಗಳು ಮೂರನೇ ಮತ್ತು ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶ ತಂಡಗಳು ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
- ಕರ್ನಾಟಕ vs ವಿದರ್ಭ (ವಿಸಿಎ ಸ್ಟೇಡಿಯಂ, ನಾಗ್ಪುರ್)
- ಮುಂಬೈ vs ಬರೋಡ (ಎಂಸಿಎ ಸ್ಟೇಡಿಯಂ, ಮುಂಬೈ)
- ತಮಿಳುನಾಡು vs ಸೌರಾಷ್ಟ್ರ (ಎಸ್ಆರ್ಸಿ ಗ್ರೌಂಡ್, ಕೊಯಂಬತ್ತೂರು)
- ಮಧ್ಯ ಪ್ರದೇಶ vs ಆಂಧ್ರ ಪ್ರದೇಶ (ಹೋಲ್ಕರ್ ಸ್ಟೇಡಿಯಂ, ಇಂದೋರ್)
ಇದನ್ನೂ ಓದಿ: Wanindu Hasaranga: ಲಸಿತ್ ಮಾಲಿಂಗ ದಾಖಲೆ ಮುರಿದ ವನಿಂದು ಹಸರಂಗ
ಕ್ವಾರ್ಟರ್ ಫೈನಲ್ನ ಎಲ್ಲಾ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ. ಈ ಪಂದ್ಯಗಳನ್ನು ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಪೋರ್ಟ್ಸ್ 18 ಚಾನೆಲ್ಗಳಲ್ಲಿ ವೀಕ್ಷಿಸಬಹುದು.
Published On - 9:05 am, Tue, 20 February 24