
2025- 26 ರ ರಣಜಿ (Ranji Trophy 2025) ಆವೃತ್ತಿಯ ನಾಲ್ಕನೇ ಸುತ್ತು ಇಂದಿನಿಂದ ಆರಂಭವಾಗಿದೆ. ಈ ಆವೃತ್ತಿಯಲ್ಲಿ ಹಲವು ಯುವ ಕ್ರಿಕೆಟಿಗರು ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಬಿಸಿಸಿಐ (BCCI) ಗಮನ ಸೆಳೆದಿದ್ದಾರೆ. ಅವರುಗಳಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವೇಗಿ ಆಕಿಬ್ ನಬಿ (Aaqib Nabi) ಅಗ್ರಸ್ಥಾನದಲ್ಲಿದ್ದಾರೆ. ಸೀಸನ್ ಆರಂಭದಿಂದಲೂ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ತಂಡದ ವಿಕೆಟ್‌ಗಳನ್ನು ಹಿಂಡು ಹಿಂಡಾಗಿ ಉರುಳಿಸುತ್ತಿರುವ ನಬಿ, ಮೂರನೇ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ.
ನವೆಂಬರ್ 8 ರ ಶನಿವಾರ ಪ್ರಾರಂಭವಾದ ಜಮ್ಮುಕಾಶ್ಮೀರ ಮತ್ತು ದೆಹಲಿ ನಡುವಿನ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದಂದು ಆಕಿಬ್ ನಬಿ ವಿನಾಶಕಾರಿ ಪ್ರದರ್ಶನ ನೀಡಿದರು. ನಬಿ ದಾಳಿಗೆ ನಲುಗಿದ ದೆಹಲಿಯ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಮೊದಲು ಅರ್ಪಿತ್ ರಾಣಾ ಅವರನ್ನು ಔಟ್ ಮಾಡುವ ಮೂಲಕ ಆಕಿಬ್ ನಬಿ ತಂಡಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು. ನಂತರ ದೆಹಲಿಯ ಕೆಳ ಕ್ರಮಾಂಕವನ್ನು ಕೆಡುವುವ ಕೆಲಸ ಶುರು ಮಾಡಿದ ನಬಿ ಕೊನೆಯ ಐದು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು.
ನಬಿ ಈ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಿದ 16 ಓವರ್‌ಗಳಲ್ಲಿ ಕೇವಲ 35 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದರು. ಆಕಿಬ್ ಅವರ ಐದು ವಿಕೆಟ್ ಗೊಂಚಲಿನ ಪ್ರಮುಖ ಅಂಶವೆಂದರೆ ಐದು ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ವರು ತಮ್ಮ ಖಾತೆಯನ್ನು ತೆರೆಯಲು ಸಹ ವಿಫಲರಾದರು. ನಬಿ ಔಟ್ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಹೃತಿಕ್ ಶೌಕೀನ್, ಆದರೆ ಅವರು ಕೇವಲ ಏಳು ರನ್ ಗಳಿಸುವುದಕಷ್ಟೇ ಯಶಸ್ವಿಯಾದರು.
Ranji Trophy: ಅಜೇಯ 142 ರನ್..! ರಣಜಿಯಲ್ಲಿ ಮುಂದುವರೆದ ಕರುಣ್ ನಾಯರ್ ಅಬ್ಬರ
ಮೇಲೆ ಹೇಳಿದಂತೆ ಈ ಸೀಸನ್ನ ಮೊದಲ ಪಂದ್ಯದಿಂದಲೇ ಆಕಿಬ್ ನಬಿ ಬ್ಯಾಟ್ಸ್‌ಮನ್‌ಗಳಿಗೆ ಸಮಸ್ಯೆಯಾಗುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿರುವುದು ಇದು ಮೂರನೇ ಬಾರಿ. ಛತ್ತೀಸ್‌ಗಢ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಾತ್ರ ಅವರು ಕೊಂಚ ನಿಷ್ಪರಿಣಾಮಕಾರಿಯಾಗಿದ್ದರು. ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಇದಕ್ಕೂ ಮೊದಲು, ಮುಂಬೈ ವಿರುದ್ಧ ಮತ್ತು ರಾಜಸ್ಥಾನ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಆಕಿಬ್ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು. ಒಟ್ಟಾರೆಯಾಗಿ, ಅವರು ಇಲ್ಲಿಯವರೆಗೆ ಕೇವಲ ಆರು ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Sat, 8 November 25