Sarfaraz Khan: ರನ್ ಮಳೆ ಸುರಿಸಿದರೂ ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ..!

| Updated By: ಝಾಹಿರ್ ಯೂಸುಫ್

Updated on: Jun 19, 2022 | 3:38 PM

Ranji Trophy: ಮುಂಬೈ ತಂಡವು ಫೈನಲ್​ಗೆ ಪ್ರವೇಶಿಸಿದ್ದು, ಅಂತಿಮ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ 24 ರ ಹರೆಯದ ಸರ್ಫರಾಜ್ ಖಾನ್ ದ್ವಿಶತಕ ಬಾರಿಸಿದರೆ ರಣಜಿ ಸೀಸನ್​ವೊಂದರಲ್ಲಿ 1000 ರನ್​ ಪೂರೈಸಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

Sarfaraz Khan: ರನ್ ಮಳೆ ಸುರಿಸಿದರೂ ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ..!
Sarfaraz Khan
Image Credit source: TOI
Follow us on

ಫಾರ್ಮ್​ನಲ್ಲಿರುವ ಆಟಗಾರನಿಗೆ ಚಾನ್ಸ್​…ಇದು ಕ್ರಿಕೆಟ್​ ಅಂಗಳದಲ್ಲಿರುವ ಅಲಿಖಿತ ಸಿದ್ದಾಂತ. ಆದರೆ ಟೀಮ್ ಇಂಡಿಯಾದಲ್ಲಿ ಅಂತಹದೊಂದು ಪ್ರಕ್ರಿಯೆ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಹಲವು ಬಾರಿ ಚರ್ಚೆಗೀಡಾಗಿದೆ. ಅದರಲ್ಲೂ ಭಾರತ ಟೆಸ್ಟ್ ತಂಡದಲ್ಲಿ ಬದಲಾವಣೆಗಳಾಗುತ್ತಿಲ್ಲ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರಶ್ನೆ ಕ್ರಿಕೆಟ್​ ಪ್ರೇಮಿಗಳ ಮುಂದಿದೆ. ಏಕೆಂದರೆ ಯುವ ಆಟಗಾರನೊಬ್ಬರ ರಣಜಿ ಕ್ರಿಕೆಟ್​ನಲ್ಲಿ ಸತತವಾಗಿ ಅಬ್ಬರಿಸುತ್ತಿದ್ದರೂ, ರನ್​ ಸುರಿಮಳೆ ಹರಿಸುತ್ತಿದ್ದರೂ ಟೀಮ್ ಇಂಡಿಯಾದಲ್ಲಿ ಅವಕಾಶ ಮಾತ್ರ ಸಿಗುತ್ತಿಲ್ಲ. ಹೌದು, ಇಲ್ಲಿ ಹೇಳುತ್ತಿರುವುದು ಮುಂಬೈ ತಂಡದ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಬಗ್ಗೆ. ಈ ಹೆಸರು ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ. ಅದರಲ್ಲೂ ಆರ್​ಸಿಬಿ ಅಭಿಮಾನಿಗಳಿಗೆ ಸರ್ಫರಾಜ್ ಬಗ್ಗೆ ಹೇಳಬೇಕೆಂದಿಲ್ಲ. ಏಕೆಂದರೆ ಈ ಯುವ ಆಟಗಾರ ಈ ಹಿಂದೆ ಆರ್​ಸಿಬಿ ಪರ ಆಡಿದ್ದರು. ಅಲ್ಲದೆ ಸಿಕ್ಕ ಅವಕಾಶದಲ್ಲಿ ಒಂದಷ್ಟು ಪಂದ್ಯಗಳಲ್ಲಿ ಮಿಂಚಿದ್ದರು. ಆದರೆ ಸರ್ಫರಾಜ್ ಟಿ20 ಕ್ರಿಕೆಟ್​ಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ದೇಶೀಯ ಟೆಸ್ಟ್​ ಟೂರ್ನಿ ರಣಜಿಯಲ್ಲಿ ಎಂಬುದು ವಿಶೇಷ.

ಏಕೆಂದರೆ ರಣಜಿಯಲ್ಲಿ ಸರ್ಫರಾಜ್ ನಾಗಾಲೋಟವನ್ನು ತಡೆಯಲು ಬೌಲರ್​ಗಳಿಗೆ ಸಾಧ್ಯವಾಗುತ್ತಿಲ್ಲ. ಅದು ಈ ಬಾರಿ ಕೂಡ ಮುಂದುವರೆದಿದೆ. ಸರ್ಫರಾಜ್ ಖಾನ್ ಪ್ರಸಕ್ತ ಸೀಸನ್​ನ ರಣಜಿಯ 5 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಒಟ್ಟು 803 ರನ್ ಕಲೆಹಾಕಿದ್ದಾರೆ. ಅಂದರೆ 134 ಸರಾಸರಿಯಲ್ಲಿ ರನ್​ಗಳನ್ನು ಗುಡ್ಡೆ ಹಾಕಿದ್ದಾರೆ. ವಿಶೇಷ ಎಂದರೆ ಇಡೀ ಟೂರ್ನಿಯಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು 630 ರನ್‌ಗಳನ್ನು ತಲುಪಿಲ್ಲ. ಆದರೆ ಮತ್ತೊಂದೆಡೆ ಸರ್ಫರಾಜ್ ಖಾನ್ 800 ಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ.

ಈ ವೇಳೆ ಒಂದು ದ್ವಿಶತಕ (275 ರನ್‌), 3 ಶತಕ ಹಾಗೂ 2 ಅರ್ಧ ಶತಕ ಬಾರಿಸಿದ್ದಾರೆ. ಇಲ್ಲಿ ಪ್ರಮುಖ ವಿಷಯವೆಂದರೆ ಅವರ ಸ್ಟ್ರೈಕ್ ರೇಟ್ 72 ಇದ್ದು, ಇದು ಪ್ರಥಮ ದರ್ಜೆ ಪಂದ್ಯಾವಳಿಯ ವಿಷಯದಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಆಗಿದೆ. ಇನ್ನು 7 ಇನಿಂಗ್ಸ್​ಗಳಲ್ಲಿ ಸರ್ಫರಾಜ್ ಬ್ಯಾಟ್​ನಿಂದ ಮೂಡಿಬಂದಿರುವುದು 78 ಬೌಂಡರಿ ಹಾಗೂ 16 ಸಿಕ್ಸರ್‌ಗಳು. ಅಂದರೆ, ಬೌಂಡರಿಯಿಂದಲೇ 408 ರನ್ ಗಳಿಸಿದ್ದಾರೆ. ಅಂದಹಾಗೆ ಸರ್ಫರಾಜ್ ಅಬ್ಬರಿಸುತ್ತಿರುವುದು ಇದೇ ಮೊದಲೇನಲ್ಲ.

ಇದನ್ನೂ ಓದಿ
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಕೊರೊನಾದಿಂದಾಗಿ ಕಳೆದ ವರ್ಷ ರಣಜಿ ಟೂರ್ನಿ ಆಯೋಜಿಸಲಾಗಿರಲಿಲ್ಲ. ಇದಕ್ಕೂ ಮುನ್ನ 2019-20 ರಲ್ಲಿ ಮುಂಬೈ ಪರ ಆಡಿದ್ದ ಸರ್ಫರಾಜ್ ಖಾನ್ 6 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 926 ರನ್ ಗಳಿಸಿದ್ದರು. ಅಂದರೆ 155ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದರು. ಈ ವೇಳೆ ಒಂದು ತ್ರಿಶತಕ (301), 3 ಶತಕ ಹಾಗೂ 2 ಅರ್ಧ ಶತಕಗಳನ್ನೂ ಸಹ ಬಾರಿಸಿದ್ದರು. ಅಂದರೆ ಕಳೆದೆರಡು ರಣಜಿ ಸೀಸನ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಹೊರಹೊಮ್ಮಿರುವ ಸರ್ಫರಾಜ್ ಖಾನ್​ಗೆ ಟೀಮ್ ಇಂಡಿಯಾದಲ್ಲಿ ಅವಕಾಶವೇ ಸಿಕ್ಕಿಲ್ಲ.

2020 ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂದು ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಚಾನ್ಸ್ ನೀಡಿರಲಿಲ್ಲ. ಇದಾಗ್ಯೂ ಈ ಬಾರಿ 800 ಕ್ಕೂ ಅಧಿಕ ರನ್​ ಕಲೆಹಾಕುವ ಮೂಲಕ ಮತ್ತೊಮ್ಮೆ ಸರ್ಫರಾಜ್ ಖಾನ್ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದಾಗ್ಯೂ ಇಂಗ್ಲೆಂಡ್ ವಿರುದ್ದ ಟೆಸ್ಟ್​ಗೆ ಸರ್ಫರಾಜ್ ಆಯ್ಕೆಯಾಗಿಲ್ಲ.

ಇದೀಗ ಮುಂಬೈ ತಂಡವು ಫೈನಲ್​ಗೆ ಪ್ರವೇಶಿಸಿದ್ದು, ಅಂತಿಮ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ 24 ರ ಹರೆಯದ ಸರ್ಫರಾಜ್ ಖಾನ್ ದ್ವಿಶತಕ ಬಾರಿಸಿದರೆ ರಣಜಿ ಸೀಸನ್​ವೊಂದರಲ್ಲಿ 1000 ರನ್​ ಪೂರೈಸಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಆಗಲಾದರೂ ಟೀಮ್ ಇಂಡಿಯಾ ಆಯ್ಕೆ ಸಮಿತಿ ಯುವ ಕ್ರಿಕೆಟಿಗನಿಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಿದ್ದಾರಾ ಕಾದು ನೋಡಬೇಕಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.