Dale Steyn: ದಿನೇಶ್ ಕಾರ್ತಿಕ್ vs ರಿಷಭ್ ಪಂತ್: ಯಾರು ಬೆಸ್ಟ್? ಇಲ್ಲಿದೆ ಉತ್ತರ
Rishabh Pant vs Dinesh Karthik: ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಬಯಸಿದರೆ, ನೀವು ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಆಟಗಾರನನ್ನು ಆರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಸದ್ಯ ಮೂವರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಿದ್ದಾರೆ. ಅವರೆಂದರೆ ಇಶಾನ್ ಕಿಶನ್ (Ishan Kishan), ರಿಷಭ್ ಪಂತ್ (Rishabh Pant) ಹಾಗೂ ದಿನೇಶ್ ಕಾರ್ತಿಕ್ (Dinesh Karthik). ಇವರಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದರೆ, ದಿನೇಶ್ ಕಾರ್ತಿಕ್ ಫಿನಿಶರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇನ್ನು ರಿಷಭ್ ಪಂತ್ ನಾಯಕ ಜವಾಬ್ದಾರಿಯೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಇತ್ತ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ತಂಡಕ್ಕೆ ಮರಳಿದರೆ ಯಾರು ಹೊರಬೀಳಲಿದ್ದಾರೆ ಎಂಬುದೇ ಈಗ ಪ್ರಶ್ನೆ. ಏಕೆಂದರೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಲಿದ್ದಾರೆ. ಈ ನಾಲ್ವರು ಆಟಗಾರರು ಪ್ಲೇಯಿಂಗ್ 11 ನ ಖಾಯಂ ಸದಸ್ಯರು ಎಂಬುದು ವಿಶೇಷ. ಹೀಗಾಗಿ ಮೂವರು ವಿಕೆಟ್ ಕೀಪರ್ಗಳಲ್ಲಿ ಒಬ್ಬರಾದರೂ ತಂಡದಿಂದ ಹೊರಬೀಳಲಿದ್ದಾರೆ. ಆದರೆ ಅದು ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆ. ಈ ಕುತೂಹಲಕಾರಿ ಪ್ರಶ್ನೆಗೆ ಸೌತ್ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಉತ್ತರಿಸಿದ್ದಾರೆ.
ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್..ಟಿ20 ವಿಶ್ವಕಪ್ ತಂಡದಲ್ಲಿ ಇವರಿಬ್ಬರಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಎಂಬ ಪ್ರಶ್ನೆಯನ್ನು ಡೇಲ್ ಸ್ಟೇನ್ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಸ್ಟೇನ್, ನಾವು ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಇಬ್ಬರ ಆಟವನ್ನು ನೋಡಿದ್ದೇವೆ. ರಿಷಭ್ ಪಂತ್ ಈ ಸರಣಿಯಲ್ಲಿ ನಾಲ್ಕು ಮ್ಯಾಚ್ ಆಡಿದ್ದಾರೆ. ಇದಾಗ್ಯೂ ಉತ್ತಮ ಆಟ ಪ್ರದರ್ಶಿಸಿಲ್ಲ. ಉತ್ತಮ ಆಟಗಾರರು ತಪ್ಪುಗಳಿಂದ ಕಲಿಯುತ್ತಾರೆ ಎಂದು ನೀವು ಹೇಳಬಹುದು. ಆದರೆ ಪಂತ್ 4 ಮ್ಯಾಚ್ ಆಡಿದರೂ ತಮ್ಮ ತಪ್ಪನ್ನು ತಿದ್ದಿಕೊಂಡಿಲ್ಲ. ಮತ್ತೊಂದೆಡೆ ದಿನೇಶ್ ಕಾರ್ತಿಕ್ ಪ್ರತಿ ಬಾರಿಯೂ ತಾನು ಯಾವ ಮಟ್ಟದ ಬ್ಯಾಟ್ಸ್ಮನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರಲ್ಲೇ ಯಾರು ತಂಡದಲ್ಲಿ ಇರಬೇಕೆಂದು ಗೊತ್ತಾಗುತ್ತದೆ ಎಂದು ಸ್ಟೇನ್ ಹೇಳಿದ್ದಾರೆ.
ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಬಯಸಿದರೆ, ನೀವು ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಆಟಗಾರನನ್ನು ಆರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಸದ್ಯ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ತಮ್ಮ ಫಾರ್ಮ್ ಅನ್ನು ಮುಂದುವರಿಸಿದರೆ, ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಆಟಗಾರರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿ ನನ್ನ ಪ್ರಕಾರ ಟೀಮ್ ಇಂಡಿಯಾಗೆ ಡಿಕೆ ಅತ್ಯುತ್ತಮ ಆಯ್ಕೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. 4 ಇನ್ನಿಂಗ್ಸ್‌ಗಳಲ್ಲಿ 158.6 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ 92 ರನ್ ಗಳಿಸಿದ್ದಾರೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ 186.7 ರ ಸ್ಟ್ರೈಕ್ ರೇಟ್‌ನೊಂದಿಗೆ 84 ರನ್ ಗಳಿಸಿದ್ದಾರೆ. ಮತ್ತೊಂದೆಡೆ ರಿಷಬ್ ಪಂತ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೇಲಿನ ಕ್ರಮಾಂಕದಲ್ಲಿ ಆಡಿದರೂ ಕೇವಲ 57 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ರಿಷಭ್ ಪಂತ್ಗಿಂತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ದಿನೇಶ್ ಕಾರ್ತಿಕ್ ಉತ್ತಮ ಆಯ್ಕೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.