
ಟಿನ್ಸುಕಿಯಾ ಮೈದಾನದಲ್ಲಿ ನಡೆದ ಅಸ್ಸಾಂ ಮತ್ತು ಸರ್ವಿಸಸ್ (Assam vs Services) ನಡುವಿನ 2025-26ರ ರಣಜಿ ಟ್ರೋಫಿ (Ranji Trophy) ಪಂದ್ಯ ಕೇವಲ ಎರಡೇ ದಿನಗಳಲ್ಲಿ ಕೊನೆಗೊಂಡಿದೆ. ಈ ಪಂದ್ಯವನ್ನು ಸರ್ವಿಸಸ್ ತಂಡವು ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇಡೀ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಅಸ್ಸಾಂ ಪರ ಎರಡೂ ಇನ್ನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿಯಿತು. ಪಂದ್ಯದ ಎರಡನೇ ದಿನದಂದು ಗೆಲುವಿಗೆ ಕೇವಲ 71 ರನ್ಗಳ ಗುರಿ ಪಡೆದ ಸರ್ವಿಸಸ್ ತಂಡವು ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಸ್ಸಾಂ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್ಗಳಿಗೆ ಆಲೌಟ್ ಅಯಿತು. ತಂಡದ ಪರ ಪ್ರದ್ಯುನ್ ಸೈಕಿಯಾ 52 ರನ್ಗಳ ಇನ್ನಿಂಗ್ಸ್ ಅಡಿದರೆ, ರಿಯಾನ್ ಪರಾಗ್ 36 ರನ್ಗಳ ಕಾಣಿಕೆ ನೀಡಿದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಸರ್ವಿಸಸ್ ತಂಡ ಕೂಡ ಕೇವಲ 108 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಇರ್ಫಾನ್ ಖಾನ್ 51 ರನ್ ಬಾರಿಸಿದರು. ಇತ್ತ ಎರಡನೇ ಇನ್ನಿಂಗ್ಸ್‌ನಲ್ಲಿ ಅಸ್ಸಾಂ ತಂಡವು 75 ರನ್ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡ 2 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.
ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ಈ ಪಂದ್ಯದಲ್ಲಿ ಒಟ್ಟು 540 ಎಸೆತಗಳನ್ನು ಆಡಲಾಗಿದ್ದು, ಇದು ರಣಜಿ ಟ್ರೋಫಿಯ ಇತಿಹಾಸದಲ್ಲಿ ಚೆಂಡುಗಳ ವಿಷಯದಲ್ಲಿ ಅತ್ಯಂತ ಕಡಿಮೆ ಪಂದ್ಯವಾಗಿದೆ. ಈ ಪಂದ್ಯವು 1962 ರಲ್ಲಿ ರೈಲ್ವೇಸ್ ಮತ್ತು ದೆಹಲಿ ನಡುವಿನ ಪಂದ್ಯದಲ್ಲಿ ಆಡಿದ 547 ಎಸೆತಗಳ 63 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಪಂದ್ಯದಲ್ಲಿ, 91 ವರ್ಷಗಳ ರಣಜಿ ಟ್ರೋಫಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಇಬ್ಬರು ವಿಭಿನ್ನ ಬೌಲರ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಪಡೆದರು. ಇದರಲ್ಲಿ ಸರ್ವಿಸಸ್‌ನ ಅರ್ಜುನ್ ಶರ್ಮಾ ಮತ್ತು ಮೋಹಿತ್ ಜಂಗ್ರಾ ಈ ಸಾಧನೆಯನ್ನು ಮಾಡಿದರು.
ಅಸ್ಸಾಂ ತಂಡದ ಪರ ಆಡುತ್ತಿರುವ ರಿಯಾನ್ ಪರಾಗ್ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರೂ, ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸರ್ವಿಸಸ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ರಿಯಾನ್ ಒಟ್ಟು 5 ವಿಕೆಟ್‌ಗಳನ್ನು ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಈ ಪಂದ್ಯದಲ್ಲಿ ಅವರ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದ ಗೆಲುವಿನೊಂದಿಗೆ, ಸರ್ವಿಸಸ್ ತಂಡವು ಈಗ ಎರಡು ಪಂದ್ಯಗಳ ನಂತರ 13 ಅಂಕಗಳೊಂದಿಗೆ ಎಲೈಟ್ ಗ್ರೂಪ್ ಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ತಲುಪಿದೆ. ಇತ್ತ ಅಸ್ಸಾಂ ತಂಡ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಅನ್ನು ಹೊಂದಿದ್ದು, 5 ನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ