Rashid Khan: ರಶೀದ್ ಖಾನ್ ವಿಶೇಷ ದಾಖಲೆ: ಪಾಕ್ ವಿರುದ್ಧ ಸೋತರೂ ಪ್ರಶಂಸೆಗೆ ಪಾತ್ರವಾದ ಅಫ್ಘಾನಿಸ್ತಾನ
Pakistan vs Afghanistan, T20 World Cup: ಟಿ20ಯಲ್ಲಿ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿರುವ ಪಾಕ್ಗೆ ಒಂದು ಕ್ಷಣ ಸೋಲಿನ ಅನುಭವ ನೀಡಿದ್ದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ. ಇದೇ ಪಂದ್ಯದಲ್ಲಿ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ವಿಶೇಷ ದಾಖಲೆ ಬರೆದರು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ (ICC T20 World Cup) 24ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಪಾಕಿಸ್ತಾನ (Pakistan vs Afghanistan) ಹ್ಯಾಟ್ರಿಕ್ ಜಯ ತನ್ನದಾಗಿಸಿದ್ದು ಸೆಮಿ ಫೈನಲ್ ಹಂತಕ್ಕೇರುವುದು ಖಚಿತವಾಗಿದೆ. ಇದರ ನಡುವೆ ಪಾಕ್ ವಿರುದ್ಧ ಅಫ್ಘಾನಿಸ್ತಾನ ಆಟಗಾರರು (Afghanistan Players) ಆಡಿದ ಆಟ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಹೌದು, ನಾಯಕ ಬಾಬರ್ ಅಜಾಮ್ (Babar Azam) ಅವರ ಆಕರ್ಷಕ ಅರ್ಧಶತಕ ಮತ್ತು ಅಸಿಫ್ ಅಲಿ (Asif Ali) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಅಂತಿಮ ಹಂತದಲ್ಲಿ ಗೆಲುವು ಪಡೆದುಕೊಂಡಿತು. ಆದರೆ, ಒಂದು ಹಂತದಲ್ಲಿ ಗೆಲುವು ಸಂಪೂರ್ಣ ಅಫ್ಘಾನ್ ಪರ ವಾಲಿದ್ದು ಸುಳ್ಳಲ್ಲ. ಟಿ20ಯಲ್ಲಿ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿರುವ ಪಾಕ್ಗೆ ಒಂದು ಕ್ಷಣ ಸೋಲಿನ ಅನುಭವ ನೀಡಿದ್ದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ.
ಅಫ್ಘಾನಿಸ್ತಾನ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. 12 ರನ್‌ಗಳಿದ್ದಾಗ ಮೊಹಮ್ಮದ್ ರಿಜ್ವಾನ್ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಬಾಬರ್ ಅಜಮ್ ಹಾಗೂ ಫಕರ್ ಜಮಾನ್ 63 ರನ್‌ಗಳ ಜೊತೆಯಾಟವನ್ನು ನೀಡಿದರು. ಅದಾದ ನಂತರ 97 ರನ್‌ಗಳಿಸಿದ್ದಾಗ ಮೊಹಮ್ಮದ್ ಹಫೀಜ್ ವಿಕೆಟ್ ಕಳೆದುಕೊಂಡರು. ನಂತರ ಅರ್ಧಶತಕ ಗಳಿಸಿದ್ದ ನಾಯಕ ಬಾಬರ್ ಅಜಾಮ್ ಕೂಡ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅನುಭವಿ ಶೋಯೆಬ್ ಮಲಿಕ್ ಕೂಡ ನವೀನ್ ಉಲ್ ಹಕ್ ಎಸೆತಕ್ಕೆ ಔಟಾದರು.
ಈ ಮೂಲಕ ಪಾಕಿಸ್ತಾನ 124 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಅಂತಿಮ 12 ಎಸೆತಗಳಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 24 ರನ್‌ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಎಲ್ಲರೂ ಅಫ್ಘಾನ್ಗೇ ಗೆಲುವೆಂದು ಅಂದುಕೊಂಡಿದ್ದರು. ಕರೀಮ್ ಜನತ್ ಎಸೆದ ಈ 19ನೇ ಓವರ್‌ಅನ್ನು ಆಸಿಫ್ ಅಲಿ ಎದುರಿಸಿದರು. ಈ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವನ್ನು ತಂದಿತ್ತರು, ಅಫ್ಘಾನಿಸ್ತಾನ ತಂಡದ ಕೈಯಲ್ಲಿದ್ದ ಗೆಲುವನ್ನು ಕಿತ್ತರು. ರೋಚಕ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಇದಕ್ಕೂ ಮುನ್ನ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ, ಪಾಕಿಸ್ತಾನ ಬೌಲರ್‌ಗಳ ಕರಾರುವಾಕ್ ದಾಳಿ ನಡುವೆಯೂ ನಾಯಕ ಮೊಹಮದ್ ನಬಿ (35*ರನ್, 32 ಎಸೆತ, 5 ಬೌಂಡರಿ) ಹಾಗೂ ಗುಲ್ಬಾದಿನ್ ನೈಬ್ (35*ರನ್, 25 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 6 ವಿಕೆಟ್‌ಗೆ 147 ರನ್‌ಗಳಿಸಿತು.
ವಿಶೇಷ ದಾಖಲೆ ಬರೆದ ರಶೀದ್ ಖಾನ್:
ಇದೇ ಪಂದ್ಯದಲ್ಲಿ ಅಫ್ಘಾನ್ ಪಡೆಯ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ 100 ವಿಕೆಟ್‌ಗಳ ವಿಶೇಷ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 53 ಪಂದ್ಯಗಳಲ್ಲಿ ರಶೀದ್ 100 ವಿಕೆಟ್ ಪಡೆದ ಸಾಧನೆ ಮಾಡುವ ಮೂಲಕ ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿದಿದ್ದಾರೆ. ಸ್ಲಿಂಗಾ ಖ್ಯಾತಿಯ ಮಾಲಿಂಗ 76 ಪಂದ್ಯಗಳಲ್ಲಿ ವಿಕೆಟ್‌ಗಳ ಶತಕದ ದಾಖಲೆ ತಮ್ಮದಾಗಿಸಿಕೊಂಡಿದ್ದರು.
T20 World Cup 2021: 3 ಇನ್ನಿಂಗ್ಸ್ನಲ್ಲಿ ಕೇವಲ 5 ರನ್; ಒಂದು ಬಾಲ್ ಕೂಡ ಆಡದೇ ವಿಕೆಟ್ ಒಪ್ಪಿಸಿದ ರಸೆಲ್!
(Rashid Khan achieved yet another landmark in the clash of Pakistan vs Afghanistan T20 World Cup)