ಎರಡೂ ತಂಡದ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದರೆ ಎರಡು ಬಲಿಷ್ಠ ಟೀಮ್ಗಳ ನಡುವಣ ಕಾದಾಟ ಹೇಗಿರುತ್ತೆ ಎಂಬುದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (GT vs SRH) ನಡುವಣ ಪಂದ್ಯವೇ ಸಾಕ್ಷಿ. ಕೊನೆಯ 6 ಎಸೆತಗಳಲ್ಲಿ ಜಿಟಿ ತಂಡಕ್ಕೆ ಗೆಲ್ಲಲು 22 ರನ್ಗಳು ಬೇಕಾಗಿದ್ದಾಗ ರಾಹುಲ್ ತೇವಾಟಿಯ (Rahul Tewatia) ಹಾಗೂ ರಶೀದ್ ಖಾನ್ (Rashid Khan) ಸ್ಫೋಟಕ ಬ್ಯಾಟಿಂಗ್ ನಡೆಸಿ ಕೊನೆಯ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ತಂಡಕ್ಕೆ ಊಹಿಸಲಾಗದ ರೀತಿಯಲ್ಲಿ ಜಯ ತಂದಿಟ್ಟರು. ಹೈ ಸ್ಕೋರ್ ಗೇಮ್ನಲ್ಲಿ 5 ವಿಕೆಟ್ಗಳ ರೋಚಕ ಗೆಲುವು ಕಂಡ ಹಾರ್ದಿಕ್ ಪಾಂಡ್ಯ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲು ಏಳರಲ್ಲಿ ಗೆಲುವು ಕಂಡು ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿದೆ. ಇತ್ತ ಎಸ್ಆರ್ಹೆಚ್ ಪರ ಉಮ್ರಾನ್ ಮಲಿಕ್ 5 ವಿಕೆಟ್ ಕಿತ್ತು ಮಾರಕ ದಾಳಿ ಸಂಘಟಿಸಿದರೂ ಪ್ರಯೋಜನಕ್ಕೆ ಬರಲಿಲ್ಲ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಪರ ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಕಣಕ್ಕಿಳಿದರು. ಈ ಪೈಕಿ ವಿಲಿಯಮ್ಸನ್ 5 ರನ್ ಗಳಿಸಿ ಔಟ್ ಆದರೆ, ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ರಾಹುಲ್ ತ್ರಿಪಾಠಿ 16 ರನ್, ಏಡನ್ ಮಾರ್ಕ್ರಮ್ 56 ರನ್, ನಿಕೋಲಸ್ ಪೂರನ್ 3 ರನ್, ವಾಷಿಂಗ್ಟನ್ ಸುಂದರ್ 3 ರನ್ ಗಳಿಸಿದರೆ, ಮಾರ್ಕೊ ಜನ್ಸೆನ್ ಅಜೇಯ 8 ರನ್ ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳಿಸಿದರು.
ಶಶಾಂಕ್ ಶರ್ಮಾ ಫೆರ್ಗ್ಯುಸನ್ ಎಸೆದ ಅಂತಿಮ ಓವರ್ನ ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಒಟ್ಟು 6 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಜಿಟಿ ಪರ ದುಬಾರಿಯಾದರೂ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರು.
196 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 46 ಎಸೆತಗಳಲ್ಲಿ 69 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್ ಡಬಲ್ ಆಘಾತ ನೀಡಿದರು. ಗಿಲ್ (22) ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯರನ್ನು (10) ಪೆವಿಲಿಯನ್ಗೆ ಅಟ್ಟಿದರು. ಬಳಿಕ ಸಾಹ 28 ಅವರಿಗೆ ಡೇವಿಡ್ ಮಿಲ್ಲರ್ ಅವರಿಂದ ಉತ್ತಮ ಬೆಂಬಲ ದೊರಕಿತು. ಇನ್ನಿಂಗ್ಸ್ನ 14ನೇ ಓವರ್ನಲ್ಲಿ ಮಗದೊಮ್ಮೆ ದಾಳಿಗಿಳಿದ ಮಲಿಕ್ ಸಾಹರನ್ನು ಕ್ಲೀನ್ ಬೌಲ್ಡ್ ಮಾಡಿದರು. 38 ಎಸೆತಗಳನ್ನು ಎದುರಿಸಿದ ಸಹಾ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.
ಗುಜರಾತ್ ಒಂದು ಹಂತದಲ್ಲಿ 16 ಓವರ್ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು. ಆದರೆ ಮುರಿಯದ ಆರನೇ ವಿಕೆಟ್ಗೆ 24 ಎಸೆತಗಳಲ್ಲಿ 59 ರನ್ಗಳ ಜೊತೆಯಾಟ ಕಟ್ಟಿದ ತೆವಾಟಿಯಾ ಹಾಗೂ ರಶೀದ್, ಹೈದರಾಬಾದ್ ಕೈಯಿಂದ ಗೆಲುವನ್ನು ಅಕ್ಷರಶಃ ಕಸಿದುಕೊಂಡರು. ತೇವಾಟಿಯಾ 40* ರನ್(21 ಬಾಲ್, 4 ಬೌಂಡರಿ, 2 ಸಿಕ್ಸ್) ಹಾಗೂ ರಶೀದ್ ಖಾನ್ 31* ರನ್(11 ಬಾಲ್, 4 ಸಿಕ್ಸ್) ಸ್ಪೋಟಕ ಆಟವಾಡಿದರು. ಪ್ರಮುಖವಾಗಿ ಕೊನೆ ಓವರ್ನಲ್ಲಿ ಗೆಲುವಿಗಾಗಿ 22 ರನ್ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ದಾಳಿಗಿಳಿದ ಮಾರ್ಕೋ ಜಾನ್ಸನ್ ಅವರಿಗೆ, ತೇವಾಟಿಯಾ ಹಾಗೂ ರಶೀದ್ (6, 1, 6, 0, 6, 6) 25 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
DC vs KKR Prediction Playing XI: ಸೋಲಿನ ಸುಳಿಯಲ್ಲಿರುವ ಉಭಯ ತಂಡಗಳಲ್ಲಿ ಬದಲಾವಣೆ ಖಚಿತ! ಯಾರಿಗೆ ಅವಕಾಶ?