IND vs AUS: ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್ ತಿಳಿಸಿದ ಅಶ್ವಿನ್

India vs Australia: ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಭಾರತೀಯ ಬೌಲರ್​ಗಳು ನಿರ್ಣಾಯಕ ಪಾತ್ರವಹಿಸಿದ್ದರು. ಇದೀಗ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್​ಗಳು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

IND vs AUS: ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್ ತಿಳಿಸಿದ ಅಶ್ವಿನ್
Ashwin

Updated on: Mar 04, 2025 | 12:45 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯ ಇಂದು (ಮಾರ್ಚ್ 4) ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಪೈಪೋಟಿ ನೀಡಿದ ಇತಿಹಾಸ ಹೊಂದಿದೆ. ಇದಾಗ್ಯೂ ಈ ಬಾರಿ ಟೀಮ್ ಇಂಡಿಯಾ ಗೆಲುವಿಗೆ ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕೆಲ ಸಲಹೆಗಳನ್ನು ನೀಡಿದ್ದಾರೆ.

ಯುಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿದ ಅಶ್ವಿನ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲ್ಲಲಿದೆ ಎಂಬುದೇ ನನ್ನ ಭಾವನೆ. ಏಕೆಂದರೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ವರುಣ್ ಚಕ್ರವರ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ಅವರು ಕುಲ್ದೀಪ್ ಯಾದವ್ ಎಸೆತದಲ್ಲಿ ಔಟ್ ಆಗುತ್ತಾರೆ ಎಂಬ ನಂಬಿಕೆ ನನಗಿದೆ.

ಇನ್ನು ಟ್ರಾವಿಸ್ ಹೆಡ್ ಟೀಮ್ ಇಂಡಿಯಾಗೆ ದೊಡ್ಡ ಅಪಾಯ. ಅವರು ಮೊದಲ 10 ಓವರ್​ಗಳಲ್ಲಿ ಚೆನ್ನಾಗಿ ಆಡಿದರೆ ಪಂದ್ಯ ಆಸ್ಟ್ರೇಲಿಯಾ ಪರ ವಾಲುತ್ತದೆ. ಇದಾಗ್ಯೂ ಈ ಬಾರಿ ನಾನು ಹೆಡ್ ಮತ್ತು ವರುಣ್ ನಡುವಿನ ಪೈಪೋಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.

ಇನ್ನು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಲು ವರುಣ್ ಚಕ್ರವರ್ತಿಗೆ ಟೀಮ್ ಇಂಡಿಯಾ ನಾಯಕ ಬೇಗನೆ ಓವರ್​ಗಳನ್ನು ನೀಡಬೇಕು. ಹೊಸ ಚೆಂಡಿನಲ್ಲಿ ಅವರು ಹೆಡ್ ವಿಕೆಟ್ ಪಡೆಯಬಲ್ಲರು. ಮೊದಲ 10 ಓವರ್​ಗಳಲ್ಲೇ ವರುಣ್ ಚಕ್ರವರ್ತಿಯಿಂದ ಬೌಲಿಂಗ್ ಮಾಡಿಸಬೇಕೆಂದು ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಲಹೆ ನೀಡಿದ್ದಾರೆ.

ಈ ಮೂಲಕ ಆರಂಭದಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಪಡೆಯಬಹುದು. ಒಂದು ವೇಳೆ ಹೆಡ್ ಮೊದಲ 10 ಓವರ್​ಗಳಲ್ಲೇ ಔಟ್ ಆದರೆ ಇಡೀ ಪಂದ್ಯದ ಮೇಲೆ ಟೀಮ್ ಇಂಡಿಯಾ ಹಿಡಿತ ಸಾಧಿಸಲಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ಭಾರತ ತಂಡ ಸೆಮಿಫೈನಲ್​ಗೇರಬಹುದು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಸಲಹೆಯಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲ 10 ಓವರ್​ಗಳಲ್ಲೇ ಸ್ಪಿನ್ ಪ್ರಯೋಗ ನಡೆಸಲಿದ್ದಾರಾ? ಈ ಮೂಲಕ ಟೀಮ್ ಇಂಡಿಯಾ ಆಸೀಸ್ ಪಡೆಗೆ ಆರಂಭಿಕ ಆಘಾತ ನೀಡಲಿದ್ದಾರಾ ಕಾದು ನೋಡಬೇಕಿದೆ.