10 ಕಾಕತಾಳೀಯಗಳು ಮತ್ತು ಟೀಮ್ ಇಂಡಿಯಾದ ಸೋಲು..!
ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಆದರೆ ಇಲ್ಲಿ 2015ರ ಏಕದಿನ ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಗೆ ಹಲವು ಸಾಮ್ಯತೆಗಳಿರುವುದೇ ಈಗ ಕುತೂಹಲಕ್ಕೆ ಕಾರಣವಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ಇನ್ನೆರಡು ಹೆಜ್ಜೆಗಳು ಮಾತ್ರ ದೂರ. ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಮಾರ್ಚ್ 9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿ 2015ರ ಏಕದಿನ ವಿಶ್ವಕಪ್.
ಅಂದು ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ಗೇರಿತ್ತು. ವಿಶೇಷ ಎಂದರೆ 2015 ಕ್ಕೂ 2025ರ ಐಸಿಸಿ ಟೂರ್ನಿಗೂ ಹಲವು ಸಾಮ್ಯತೆಗಳಿವೆ. ಈ ಸಾಮ್ಯತೆಗಳೇ ಈಗ ಬಾಜಿದಾರರ ಲೆಕ್ಕಾಚಾರಗಳನ್ನು ರೂಪಿಸುತ್ತಿದೆ.
ಅಂದರೆ 2015 ಏಕದಿನ ವಿಶ್ವಕಪ್ ಸೆಮಿಫೈನಲ್ ಹಾಗೂ 2025 ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿರುವುದರಿಂದ ಒಂದಷ್ಟು ಕಾಕತಾಳೀಯ ವಿಷಯಗಳು ಚರ್ಚೆಗೀಡಾಗಿದೆ. ಹತ್ತು ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸವೇ ಈಗ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಕಂಡು ಬಂದಿರುವ ಪ್ರಮುಖ ಸಾಮ್ಯತೆಗಳನ್ನು ನೋಡುವುದಾದರೆ….
- 2015 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದರೆ, ಅತ್ತ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಸೆಣಸಿದ್ದವು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ನಲ್ಲಿ ಇದೇ ತಂಡಗಳು ಮುಖಾಮುಖಿಯಾಗುತ್ತಿದೆ.
- 2015ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಈ ಬಾರಿಯೂ ಪಾಕ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
- 2015ರ ವಿಶ್ವಕಪ್‌ನಲ್ಲಿ, ಆಸ್ಟ್ರೇಲಿಯಾ ತಂಡದಲ್ಲಿ ಜಾನ್ಸನ್ (ಮಿಚೆಲ್ ಜಾನ್ಸನ್) ಎಂಬ ಉಪನಾಮ ಹೊಂದಿರುವ ವೇಗದ ಬೌಲರ್ ಇದ್ದನು. ಈ ಬಾರಿ ಕೂಡ ಆಸ್ಟ್ರೇಲಿಯಾ ತಂಡದಲ್ಲಿ ಜಾನ್ಸನ್ (ಸ್ಪೆನ್ಸರ್ ಜಾನ್ಸನ್) ಹೆಸರಿನ ವೇಗದ ಬೌಲರ್ ಇರುವುದು ವಿಶೇಷ.
- 2015ರ ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯಗಳು ಮಾರ್ಚ್ ತಿಂಗಳಲ್ಲಿ ನಡೆದಿದ್ದವು. ಈ ಬಾರಿಯೂ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಮಾರ್ಚ್‌ನಲ್ಲೇ ನಡೆಯುತ್ತಿವೆ.
- 2015ರ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಕೂಡ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿದೆ. ಮೊದಲ ಸೆಮಿಫೈನಲ್ನಲ್ಲಿ ದುಬೈನಲ್ಲಿ ನಡೆದರೆ, ಎರಡನೇ ಸೆಮಿಫೈನಲ್ ಲಾಹೋರ್ನಲ್ಲಿ ಜರುಗಲಿದೆ.
- 2015ರ ವಿಶ್ವಕಪ್ ಬಳಿಕ ಭಾರತ ಟಿ20 ವಿಶ್ವಕಪ್ ಆಯೋಜಿಸಿತ್ತು. ಅಂದರೆ 2016 ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಜರುಗಿತ್ತು. ಇಂಟ್ರೆಸ್ಟಿಂಗ್ ವಿಷಯ ಎಂದರೆ ಮುಂದಿನ ವರ್ಷ, ಅಂದರೆ 2026 ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ.
- 2015ರ ವಿಶ್ವಕಪ್ ಆಯೋಜನೆಗೊಂಡಾಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ನಡೆಯುವಾಗವಾಗಲೂ ಕೆಕೆಆರ್ ಚಾಂಪಿಯನ್ ಪಟ್ಟವನ್ನು ಹೊಂದಿದೆ.
- 2015ರ ಏಕದಿನ ವಿಶ್ವಕಪ್ಗೂ ಮುನ್ನ ಐಪಿಎಲ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನನ್ನು ಸೋಲಿಸಿ ಕೆಕೆಆರ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಂದು ಫೈನಲ್ ಆಡಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಸ್ಟ್ರೇಲಿಯಾದ ನಾಯಕ ಜಾರ್ಜ್ ಬೈಲಿ ನಾಯಕರಾಗಿದ್ದರು. ಈ ಬಾರಿಯ ಐಪಿಎಲ್ ಫೈನಲ್ನಲ್ಲೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿದೆ.
- 2015ರಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮೆಂಟರ್ ಆಗಿ ಮರಳಿದ್ದರು. ಈ ಬಾರಿಯೂ ಅವರು ರಾಜಸ್ಥಾನ್ ರಾಯಲ್ಸ್ ತಂಡ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.
- 2015 ರಲ್ಲಿ ರವಿಚಂದ್ರನ್ ಅಶ್ವಿನ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಈ ಬಾರಿಯೂ ಅವರು ಸಿಎಸ್‌ಕೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಢವಢವ: ನಾಕೌಟ್ ಪಂದ್ಯಗಳಲ್ಲಿ ‘ಹೆಡ್’ ಲೈನ್
ಅಂದರೆ ಕಾಕತಾಳೀಯ ಎಂಬಂತೆ 2015 ರ ಏಕದಿನ ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಗೆ ಹಲವು ಸಾಮ್ಯತೆಗಳಿವೆ. ಈ ಸಾಮ್ಯತೆಗಳೇ ಈಗ ಬೆಟ್ಟಿಂಗ್ ಲೋಕದಲ್ಲಿ ಆಸ್ಟ್ರೇಲಿಯಾ ತಂಡವನ್ನು ಗೆಲ್ಲುವ ನೆಚ್ಚಿನ ತಂಡವನ್ನಾಗಿಸಿದೆ. ಆದರೆ 10 ವರ್ಷಗಳ ಹಳೆಯ ಸೋಲಿನ ಲೆಕ್ಕ ಚುಕ್ತಾ ಮಾಡಲು ಭಾರತ ತಂಡ ಸಜ್ಜಾಗಿದೆ. ಈ ಮೂಲಕ ಸಾಮ್ಯತೆಗಳನ್ನೆಲ್ಲಾ ಬುಡಮೇಲು ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
Published On - 10:55 am, Tue, 4 March 25
